ಮೆಕ್ಕಾ: ಸೌದಿ ಅರೇಬಿಯಾದ (Saudi Arabia) ಮೆಕ್ಕಾದಲ್ಲಿರುವ ಬಿಸಿಲ ಬೇಗೆ ಸಿಲುಕಿ ನೂರಾರು ಹಜ್ ಯಾತ್ರಿಕರು(Hajj Pilgrims) ಮೃತಪಟ್ಟಿದರುವ ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಸ್ಪಷ್ಟನೆ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್(Randhir Jaiswal) ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಈ ವರ್ಷ ಹಜ್ ಯಾತ್ರೆಗೆ ತೆರಳಿದ್ದ ಯಾತ್ರಿಕರಲ್ಲಿ 98 ಭಾರತೀಯರು ಮೃತಪಟ್ಟಿದ್ದಾರೆ. ಆದರೆ ಯಾರೆಲ್ಲಾ ಮೃತಪಟ್ಟಿದ್ದಾರೋ ಅವರು ವಯೋಸಹಜ ಖಾಯಿಲೆಯಿಂದ ಅಥವಾ ಸ್ವಾಭಾವಿಕ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿವರ್ಷ ಅನೇಕ ಭಾರತೀಯರು ಮೆಕ್ಕಾಗೆ ಹಜ್ ಯಾತ್ರೆಗೆ ತೆರಳುತ್ತಾರೆ. ಈ ವರ್ಷ 1,75,000 ಭಾರತೀಯರು ಹಜ್ ಯಾತ್ರೆಗೆ ತೆರಳಿದ್ದಾರೆ. ಜು. 9 ರಿಂದ ಜು.22ರವರೆಗೆ ಹಜ್ ಯಾತ್ರೆ ನಡೆಯಲಿದೆ. ಇದುವರೆಗೆ 98 ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ. ಅವರು ಖಾಯಿಲೆ ಮತ್ತು ವಯೋಸಹಜ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಅರಫಾ ದಿನದಂದು ಆರು ಮಂದಿ ಮೃತಪಟ್ಟರೆ, ನಾಲ್ವರು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 2023ರಲ್ಲಿ ಹಜ್ ಯಾತ್ರಿಕರ ಸಾವಿನ ಸಂಖ್ಯೆ 187 ಇತ್ತು. ಈ ಬಾರಿ ಅದೃಷ್ಟಾವಶಾತ್ ಕಡಿಮೆ ಇದೆ ಎಂದು ತಿಳಿಸಿದರು.
ಬಿಸಿಗಾಳಿ ಸಂಬಂಧಿತ ಕಾಯಿಲೆಯಿಂದ ಮೆಕ್ಕಾದಲ್ಲಿ (Mecca) 550ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದು, ಮೃತರಲ್ಲಿ ಭಾರತದ 68 ಯಾತ್ರಿಕರು ಇದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು. ಭಾರತದ 68 ಯಾತ್ರಿಕರು ಮೃತಪಟ್ಟಿರುವುದು ದೃಢವಾಗಿದೆ. ಇವರಲ್ಲಿ ಕೆಲವು ಜನ ವಯೋಸಹಜ ಕಾಯಿಲೆಯಿಂದ ಮೃತಪಟ್ಟರೆ, ಹೆಚ್ಚಿನ ಜನ ಉಷ್ಣಗಾಳಿ ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ” ಎಂಬುದಾಗಿ ರಾಜತಾಂತ್ರಿಕ ಅಧಿಕಾರಿಗಳು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
#WATCH | Delhi: On the death of Hajj pilgrims from India, MEA Spokesperson Randhir Jaiswal says, "This year, 175,000 Indian pilgrims have visited Hajj so far… We have 98 Indian pilgrims who have died in Hajj…" pic.twitter.com/8vEVzOjQ8j
— ANI (@ANI) June 21, 2024
ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, 60 ಮಂದಿ ಜೋರ್ಡಾನ್‌ನವರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಇನ್ನು ತನ್ನ ದೇಶದ ಐವರು ಯಾತ್ರಿಕರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಹೇಳಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಮತಪಟ್ಟಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ನಿಧನರಾಗಿದ್ದಾರೆ ಎಂದು ಅಲ್ಲಿನ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌದಿ ಅರೇಬಿಯಾದ ಅಧಿಕಾರಿಗಳು ಶಾಖದ ಒತ್ತಡದಿಂದ ಬಳಲುತ್ತಿರುವ 2,000ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾದವರು. ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಸಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಹಜ್ ವೀಸಾ ದುಬಾರಿಯಾದ ಕಾರಣ ಪ್ರತಿವರ್ಷ ಸಾವಿರಾರು ಯಾತ್ರಿಕರು ಅಕ್ರಮವಾಗಿಯೂ ಇಲ್ಲಿಗೆ ಆಗಮಿಸುತ್ತಾರೆ.