Site icon Vistara News

ಹಲ್ದ್ವಾನಿಯಲ್ಲಿ ಮದರಸಾ ಕೆಡವಿದ ಬಳಿಕ ಹಿಂಸೆ; ಗಲಭೆ ರೂವಾರಿ ಅಬ್ದುಲ್‌ ಮಲಿಕ್ ಬಂಧನ

Abdul Malik Arrested

Haldwani violence mastermind Abdul Malik arrested in Delhi

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾ ನೆಲಸಮ (Illegal Madrasa) ಮಾಡುವ ವೇಳೆ ಫೆಬ್ರವರಿ 8ರಂದು ಸಂಭವಿಸಿದ ಹಿಂಸಾಚಾರ (Uttarakhand Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯ ಪ್ರಮುಖ ರೂವಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬನ್‌ಭೂಲ್‌ಪುರ ಹಿಂಸಾಚಾರ ಪ್ರಕರಣದಲ್ಲಿ ಅಬ್ದುಲ್‌ ಮಲಿಕ್‌ (Abdul Malik) ಎಂಬಾತನನ್ನು ಉತ್ತರಾಖಂಡ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

ಇದರೊಂದಿಗೆ ಪ್ರಕರಣದಲ್ಲಿ ಇದುವರೆಗೆ 79 ಆರೋಪಿಗಳನ್ನು ಬಂಧಿಸಿದಂತಾಗಿದೆ. ಅದರಲ್ಲೂ, ಅಬ್ದುಲ್‌ ಮಲಿಕ್‌, ಆತನ ಪತ್ನಿ ಸಫಿಯಾ ಸೇರಿ ಆರು ಜನರ ವಿರುದ್ಧ ಅಪರಾಧಕ್ಕೆ ಪಿತೂರಿ, ವಂಚನೆ, ಸುಳ್ಳು ಮಾಹಿತಿ ಮೂಲಕ ಸರ್ಕಾರದ ಇಲಾಖೆಯನ್ನು ದಾರಿ ತಪ್ಪಿಸಿದ ಕೇಸ್‌ಗಳನ್ನು ದಾಖಲಿಸಲಾಗಿದೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಅಬ್ದುಲ್‌ ಮಲಿಕ್‌ನನ್ನು ದೆಹಲಿಯಲ್ಲಿ ಕೊನೆಗೂ ಬಂಧಿಸಲಾಗಿದೆ. ಇವರು ಕೊರ್ಟ್‌ಗೂ ನಕಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ಅಬ್ದುಲ್‌ ಮಲಿಕ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾವೊಂದನ್ನು ಪುರಸಭೆ ಅಧಿಕಾರಿಗಳು ನೆಲಸಮಗೊಳಿಸಿದ್ದರು. ಅಕ್ರಮ ಮದರಸಾ ನೆಲಸಮಗೊಳಿಸಿದ್ದನ್ನು ಖಂಡಿಸಿದ ಮುಸ್ಲಿಮರು ಗಲಭೆ ನಡೆಸಿದ್ದರು. ಬನ್‌ಭೂಲ್‌ಪುರದಲ್ಲಿ‌ ಫೆಬ್ರವರಿ 8ರಂದು ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆದಿತ್ತು. ಪುರಸಭೆ ಕಾರ್ಮಿಕರು ಹಾಗೂ ಪೊಲೀಸರ ಮೇಲೆ ಮುಸ್ಲಿಮರು ಪೆಟ್ರೋಲ್‌ ಬಾಂಬ್‌ ಹಾಗೂ ಕಲ್ಲುಗಳನ್ನು ಎಸೆದಿದ್ದರು. ಗಲಭೆಯ ವೇಳೆ ನೂರಾರು ಪೊಲೀಸರು, ಮಾಧ್ಯಮದವರು ಸೇರಿ 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸೆಗೆ 6 ಜನ ಬಲಿಯಾಗಿದ್ದರು.

ಇದನ್ನೂ ಓದಿ: Uttarakhand Violence: ಅಕ್ರಮ ಮದರಸಾ ನೆಲಸಮ ಬಳಿಕ ಹಿಂಸಾಚಾರಕ್ಕೆ 4 ಬಲಿ; ಪರಿಸ್ಥಿತಿ ಉದ್ವಿಗ್ನ

ಅಬ್ದುಲ್‌ ಮಲಿಕ್‌ ಆಸ್ತಿ ಜಪ್ತಿ

ಕೋರ್ಟ್‌ ಸೇರಿ ಹಲವು ಇಲಾಖೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ, ಹಿಂಸೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಅಬ್ದುಲ್‌ ಮಲಿಕ್‌, ಆತನ ಮಗ ಸೇರಿ ಒಟ್ಟು 9 ಜನರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಹಲ್ದ್ವಾನಿ ಸಿವಿಲ್‌ ಕೋರ್ಟ್‌ ಆದೇಶಿಸಿದೆ. ಹಲ್ದ್ವಾನಿ ಪುರಸಭೆಯು ಅಬ್ದುಲ್‌ ಮಲಿಕ್‌ನಿಂದ 2.44 ಕೋಟಿ ರೂಪಾಯಿಯನ್ನು ಪಡೆದುಕೊಂಡು, ಸರ್ಕಾರದ ಆಸ್ತಿ-ಪಾಸ್ತಿಗೆ ಉಂಟಾದ ನಷ್ಟವನ್ನು ಭರಿಸಬೇಕು ಎಂದು ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ಅಬ್ದುಲ್‌ ಮಲಿಕ್‌ ಮನೆಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version