ನವದೆಹಲಿ: ಚಿನ್ನ ಎನ್ನುವುದಕ್ಕಿಂತ ಹಾಲ್‌ಮಾರ್ಕ್ ಚಿನ್ನ ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತವೆ. ಹಾಗೆಯೇ, ಹಾಲ್‌ಮಾರ್ಕ್ ಚಿನ್ನವನ್ನು (Hallmark Gold) ಮಾತ್ರ ಜನ ನಂಬುತ್ತಾರೆ. ಅಷ್ಟರಮಟ್ಟಿಗೆ ಹಾಲ್‌ಮಾರ್ಕ್ ಮಾನದಂಡವು ಜನರ ವಿಶ್ವಾಸ ಗಳಿಸಿದೆ. ಹಾಗಾಗಿಯೇ, ಕೇಂದ್ರ ಸರ್ಕಾರವು 2023ರ ಜುಲೈ 1ರಿಂದ ಪ್ರತಿಯೊಂದು ಆಭರಣದ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದೆ. ಇದರಿಂದಾಗಿ ಚಿನ್ನದ ಮೇಲೆ ಹಾಲ್‌ಮಾರ್ಕ್ ಪಡೆಯಲು ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗಿದೆ.
ಜನರಿಗೆ ಶುದ್ಧ ಹಾಗೂ ಒರಿಜಿನಲ್ ಚಿನ್ನವೇ ಸಿಗಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಹಾಲ್‌ಮಾರ್ಕಿಂಗ್ ಆಫ್ ಗೋಲ್ಡ್ ಜ್ಯುವೆಲ್ಲರಿ ಆ್ಯಂಡ್ ಗೋಲ್ಡ್ ಆರ್ಟ್‌ಫ್ಯಾಕ್ಟ್ಸ್ (ಮೂರನೇ ತಿದ್ದುಪಡಿ) ಆರ್ಡರ್ (2023) ಜಾರಿಗೆ ತಂದಿದೆ. ಕಳೆದ ಸೆಪ್ಟೆಂಬರ್ 8ರಿಂದಲೇ ನೂತನ ನಿಯಮವು ಜಾರಿಗೆ ಬಂದಿದೆ. ಹೊಸ ಆದೇಶದ ಅನ್ವಯ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಮೇಲೆ ಹಾಲ್‌ಮಾರ್ಕ್ ಇರುವುದು ಕಡ್ಡಾಯವಾಗಿದೆ. ಹಾಗಾಗಿ, ಹಾಲ್‌ಮಾರ್ಕ್ ಚಿನ್ನದ ದರವು ಬದಲಾಗಿದೆ.
ಹಾಲ್‌ಮಾರ್ಕ್ ಚಿನ್ನ ಪಡೆಯಲು ಇಷ್ಟು ಪಾವತಿಸಬೇಕು
- ಒಂದು ಚಿನ್ನದ ಆಭರಣದ ಮೇಲೆ ಹಾಲ್‌ಮಾರ್ಕ್ ಪಡೆಯಲು 45 ರೂಪಾಯಿ ನೀಡಬೇಕು.
- ಚಿನ್ನಾಭರಣಗಳ ಒಂದು ಸರಕಿಗೆ (Consignment) ಕನಿಷ್ಠ 200 ರೂ. ಪಾವತಿಸಬೇಕು. ಇದು ಜಿಎಸ್ಟಿ ಹೊರತಾದ ಶುಲ್ಕ.
- ಒಂದು ಬೆಳ್ಳಿಯ ಆಭರಣದ ಮೇಲೆ ಹಾಲ್‌ಮಾರ್ಕ್ ಪಡೆಯಲು 35 ರೂ. ಪಾವತಿಸಬೇಕು.
- ಬೆಳ್ಳಿ ಆಭರಣಗಳ ಒಂದು ಸರಕಿಗೆ (Consignment) 150 ರೂ. (ಜಿಎಸ್ಟಿ ಪ್ರತ್ಯೇಕ) ನೀಡಬೇಕು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಸ್ರೇಲ್ ಸಮರದ ಎಫೆಕ್ಟ್?
ಏನಿದು ಹಾಲ್‌ಮಾರ್ಕ್?
ಯಾವುದೇ ಚಿನ್ನ ಅಥವಾ ಬೆಳ್ಳಿಯ ಶುದ್ಧತೆ, ಉತ್ಕೃಷ್ಟತೆಯನ್ನು ಅಳೆಯುವ ಮಾನದಂಡವೇ ಹಾಲ್‌ಮಾರ್ಕ್. ಚಿನ್ನದ ಶುದ್ಧತೆಯನ್ನು ದೇಶದ ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಬಳಿಕವೇ ಬಿಐಎಸ್ ಅಥವಾ ಬ್ಯೂರೋ ಆಫ್ ಇಂಡಿಯನ್ (Bureau of Indian Standards) ಹಾಲ್‌ಮಾರ್ಕ್ ನೀಡುತ್ತದೆ. ಚಿನ್ನದ ಆಭರಣದ ಮೇಲೆ ಒಂದು ಬಿಐಎಸ್ ಹಾಲ್‌ಮಾರ್ಕ್, ಕ್ಯಾರಟ್‌ನಲ್ಲಿ ಶುದ್ಧತೆ ಹಾಗೂ ಆರು ಅಲ್ಫಾನ್ಯೂಮರಿಕ್ ಚಿಹ್ನೆಗಳು ಇದ್ದರೆ ಅದನ್ನು ಹಾಲ್‌ಮಾರ್ಕ್ ಚಿನ್ನ ಎನ್ನುತ್ತಾರೆ. ಹಾಲ್‌ಮಾರ್ಕ್ ಇದ್ದರೆ ಅದು ಶುದ್ಧ ಚಿನ್ನ ಎಂದೇ ಅರ್ಥ.