ಕೋಲ್ಕೊತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali Case) ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಭೂ ಸ್ವಾಧೀನ ಸೇರಿ ಹಲವು ಪ್ರಕರಣಗಲ್ಲಿ ಬಂಧಿತನಾಗಿರುವ ಟಿಎಂಸಿಯ ಉಚ್ಚಾಟಿತ ನಾಯಕ ಶಹಜಹಾನ್ ಶೇಖ್‌ನನ್ನು (Shahjahan Sheikh) ಸಿಬಿಐಗೆ ವಹಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೋಲ್ಕೊತಾ ಹೈಕೋರ್ಟ್ (Calcutta High Court) ಆದೇಶಿಸಿದೆ. ಅಷ್ಟೇ ಅಲ್ಲ, ಇ.ಡಿ ಅಧಿಕಾರಿಗಳ ಮೇಲೆ ಶಹಜಹಾನ್ ಶೇಖ್ ಹಾಗೂ ಆತನ ಬೆಂಬಲಿಗರು ದಾಳಿ ನಡೆಸಿದ ಪ್ರಕರಣ ಸೇರಿ ಎಲ್ಲ ಪ್ರಕರಣಗಳ ಕುರಿತು ಸಿಬಿಐ ತನಿಖೆ ನಡೆಸಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
“ಶಹಜಹಾನ್ ಶೇಖ್‌ನನ್ನು ಮಂಗಳವಾರ (ಮಾರ್ಚ್ 5) ಸಂಜೆ 4.30ರೊಳಗೆ ಸಿಬಿಐ ಕಸ್ಟಡಿಗೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್‌ಗೆ (CID) ಕೋಲ್ಕೋತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೂಡ ಸಿಬಿಐಗೆ ನೀಡಬೇಕು ಎಂದು ಸೂಚಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ.
Sandeshkhali case and attack on ED | Chief Justice Division Bench of the Calcutta High Court orders: SIT rejected on ED attack, order has been issued to handover two cases of Nazat PS to CBI, Shiekh Shahjahan to be handed over to CBI & Shiekh Shahjahan and all the related enquiry… https://t.co/jVS75nJGaZ
— ANI (@ANI) March 5, 2024
ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು, ಶಹಜಹಾನ್ ಶೇಖ್ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿದೆ. ಇದಾದ ಬಳಿಕ, ಶಹಜಹಾನ್ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್ ಆದೇಶ ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಶಹಜಹಾನ್ ಶೇಖ್ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್ ಆಗಿ ಹೇಳಿತ್ತು.
ಏನಿದು ಪ್ರಕರಣ?
ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಫೆಬ್ರವರಿ 14ರಿಂದಲೂ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಶಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಶಹಜಹಾನ್ ಬೆಂಬಲಿಗರು ಹಾಗೂ ಕೆಲವು ಗ್ರಾಮಸ್ಥರು ಸೇರಿ ದಾಳಿ ನಡೆಸಿದ್ದರು. ಆಗ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು. ಅಂದಿನಿಂದ ಇ,ಡಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಜ್ಯ ಪೊಲೀಸರು ಪರಾರಿಯಾಗಿರುವ ಶಹಜಹಾನ್‌ನನ್ನು ಹುಡುಕಾಡುತ್ತಿದ್ದು, ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.
ಶಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದರು. ಆತನ ಇಬ್ಬರು ಸಹಾಯಕರಾದ ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಮರುದಿನ, ಪ್ರತಿಭಟನಾಕಾರರು ಹಜ್ರಾಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಿ ಅವರ ಕೋಳಿ ಫಾರಂಗೆ ಬೆಂಕಿ ಹಚ್ಚಿದರು. ಟಿಎಂಸಿ ನಾಯಕ ಕಬಳಿಸಿರುವ ಜಮೀನಿನಲ್ಲಿ ಕೋಳಿ ಫಾರಂ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಸಂದೇಶ್‌ಖಾಲಿ ಹಿಂಸಾಚಾರ; ಟಿಎಂಸಿಯ ಶೇಖ್ ಶಹಜಹಾನ್ ಬಂಧನಕ್ಕೆ ಹೈಕೋರ್ಟ್ ಆದೇಶ
ಶಹಜಹಾನ್ ಮತ್ತು ಆತನ ಸಹಾಯಕರು ವರ್ಷಗಟ್ಟಲೆ ತಮ್ಮ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ ಶೋಷಣೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಪೊಲೀಸರು ಸಂದೇಶ್‌ಖಾಲಿಯ ವಿವಿಧ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಲ್ಲದೆ, 16 ಪಂಚಾಯತ್‌ಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ