ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ನಡೆಯಲಿರುವ “ಹರ್ ಘರ್ ತಿರಂಗಾʼʼ ಅಭಿಯಾನ ಶನಿವಾರ ಬೆಳಗ್ಗೆ ೬ ಗಂಟೆಗೆ ಆರಂಭವಾಗಲಿದೆ.
ಪ್ರತಿ ಮನೆಯಲ್ಲಿಯೂ ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣ ನೆರವೇರಿಸಬೇಕೆಂದು ಸೂಚಿಸಲಾಗಿದ್ದು, ಈ ಸಂದರ್ಭದಲ್ಲಿ ಮನೆಯವರೆಲ್ಲರೂ ರಾಷ್ಟ್ರಗೀತೆಯನ್ನು ಹಾಡಬೇಕೆಂದು ಸಲಹೆ ನೀಡಲಾಗಿದೆ.
ಧ್ವಜಾರೋಹಣವನ್ನು ಮನೆಯಲ್ಲಿ ಸಣ್ಣ ಮಕ್ಕಳಿಂದ ಮಾಡಿಸಿ, ಅವರಲ್ಲಿ ದೇಶ ಪ್ರೇಮ ಮೂಡಿಸುವಂತೆ ಸಲಹೆ ನೀಡಲಾಗಿದೆ. ಮನೆಯಲ್ಲಿ ಹಾರಿಸುವ ರಾಷ್ಟ್ರಧ್ವಜವನ್ನು ಆಗಸ್ಟ್ 15ರವೆಗೂ ಹಾರಿಸಿ, ಅಂದು ಸಂಜೆ ಸೂರ್ಯಾಸ್ತಮಾನಕ್ಕೂ ಮೊದಲು ತೆಗೆದು, ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ಕಚೇರಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಹಾರಿಸುವ ರಾಷ್ಟ್ರಧ್ವಜವನ್ನು ಸಂಜೆ ಇಳಿಸಿ ಮತ್ತೆ ಮಾರನೇಯ ದಿನ ಹಾರಿಸಬೇಕು.
ರಾಷ್ಟ್ರಧ್ವಜವನ್ನು ಹೇಗೆ ಬಳಸಬೇಕು, ಗೌರವಿಸುವ ಬಗೆ ಹೇಗೆ ಎಂಬುದನ್ನು ಧ್ವಜಸಂಹಿತೆಯಲ್ಲಿ ವಿವರಿಸಲಾಗಿದೆ. ಇದನ್ನು ʻಭಾರತೀಯ ಧ್ವಜ ಸಂಹಿತೆ- 2002′ ಎಂದು ಕರೆಯಲಾಗುತ್ತದೆ. ಹೀಗಾಗಿ ರಾಷ್ಟ್ರಧ್ವಜ ಬಳಸುವಾಗ ಸಂಹಿತೆಯಲ್ಲಿರುವ ಈ ವಿಷಯ ಗಮನಿಸಿ;
- ಇದುವರೆಗೂ ಕೈಯಿಂದ ಹೊಲಿದ, ಹತ್ತಿಬಟ್ಟೆಯ ಧ್ವಜಗಳಿಗೆ ಮಾತ್ರ ಅವಕಾಶವಿತ್ತು. ಈಗ ಯಂತ್ರದಿಂದ ತಯಾರಿಸಿದ, ಕೈಯಿಂದ ತಯಾರಿಸಿದ, ಹತ್ತಿ/ಪಾಲಿಯೆಸ್ಟರ್/ರೇಷ್ಮೆ/ಖಾದಿ/ಉಣ್ಣೆ ಧ್ವಜಗಳನ್ನು ಹಾರಿಸಬಹುದು.
- ರಾಷ್ಟ್ರಧ್ವಜವನ್ನು ರಾತ್ರಿಯ ವೇಳೆಯಲ್ಲೂ ಹಾರಾಡಿಸಬಹುದು. ಈ ಮೊದಲು ಹಗಲಿನಲ್ಲಿ ಮಾತ್ರವೇ ಹಾರಾಡಿಸಬಹುದಾಗಿತ್ತು.
- ರಾಷ್ಟ್ರಧ್ವಜ ಆಯತಾಕಾರವಾಗಿರಬೇಕು. ಧ್ವಜ ಯಾವುದೇ ಗಾತ್ರದ್ದಾಗಿರಬಹುದು, ಆದರೆ ಉದ್ದ ಮತ್ತು ಅಗಲಗಳು 3:2 ಅನುಪಾತದಲ್ಲಿ ಇರಬೇಕು.
- ರಾಷ್ಟ್ರಧ್ವಜವನ್ನು ಎತ್ತರದಲ್ಲಿ ಹಾರಾಡಿಸಬೇಕು, ಗೌರವಯುತವಾಗಿ ನೋಡಿಕೊಳ್ಳಬೇಕು. ಹರಿದ, ಕೊಳೆಯಾದ ಧ್ವಜವನ್ನು ಹಾರಾಡಿಸಬಾರದು. ಒಂದೇ ಧ್ವಜಸ್ತಂಭದಲ್ಲಿ ಬೇರೆ ಧ್ವಜಗಳ ಜತೆಗೆ ಹಾರಿಸುವಂತಿಲ್ಲ.
ಇದು ನಿಮಗೆ ಗೊತ್ತಿರಲಿ!
ಧ್ವಜದ ಹೆಸರು ತಿರಂಗಾ- ಆದರೂ ಇದರಲ್ಲಿ ನಾಲ್ಕು ಬಣ್ಣಗಳಿವೆ. ಕೇಸರಿ, ಬಿಳಿ, ಹಸಿರು ಮತ್ತು ಅಶೋಕಚಕ್ರದಲ್ಲಿ ನೀಲಿ. ಧೈರ್ಯ, ಹೋರಾಟ, ತ್ಯಾಗದ ಪ್ರತೀಕವಾಗಿ ಕೇಸರಿ. ಶುದ್ಧತೆ, ಶಾಂತಿಯ ಪ್ರತೀಕವಾಗಿ ಬಿಳಿ. ಕೃಷಿ, ಬೆಳವಣಿಗೆ, ಭರವಸೆಯ ಸಂಕೇತವಾಗಿ ಹಸಿರು. ದೇಶದ ಪ್ರಗತಿಯ ಸೂಚಕವಾಗಿ ಅಶೋಕಚಕ್ರ ಹಾಗೂ ಅದರ ನೀಲಿ.
- ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಸೇರಿದಂತೆ ಧ್ವಜಸಂಹಿತೆಯ 9ನೇ ಸೆಕ್ಷನ್ 3ನೇ ಭಾಗದಲ್ಲಿ ಹೆಸರಿಸಲಾಗಿರುವ ಗಣ್ಯರು ಹೊರತುಪಡಿಸಿ ಇನ್ಯಾರದೇ ವಾಹನದ ಮೇಲೆ ಹಾರಾಡಿಸುವಂತಿಲ್ಲ.
- ರಾಷ್ಟ್ರಧ್ವಜದ ಸಮಾನವಾಗಿ ಅಥವಾ ಅದಕ್ಕಿಂತ ಎತ್ತರದಲ್ಲಿ ಯಾವುದೇ ಈತರ ಧ್ವಜವನ್ನು ಹಾರಾಡಿಸುವಂತಿಲ್ಲ.
- ಭಾರತೀಯ ಪ್ರಜೆಯಾಗಿರುವ ಯಾವುದೇ ನಾಗರಿಕ, ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಬರದಂತೆ ಧ್ವಜವನ್ನು ಹಾರಾಡಿಸುವ ಹಕ್ಕನ್ನು ಹೊಂದಿದ್ದಾನೆ/ಳೆ.
ಇದನ್ನೂ ಓದಿ|ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ