ಮುಂಬೈ, ಮಹಾರಾಷ್ಟ್ರ: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ವ್ಯವಹಾರವು ಅತಿ ವೇಗದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹರ್ ಪೇಮೆಂಟ್ ಡಿಜಿಟಲ್ ಎಂಬ ಮಿಷನ್‌ಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸೋಮವಾರ ಚಾಲನೆ ನೀಡಿದ್ದಾರೆ. ಡಿಜಿಟಲ್ ಪಾವತಿಗಳ ಜಾಗೃತಿ ಸಪ್ತಾಹ (DPAW) 2023ರ ಭಾಗವಾಗಿ ದೇಶದ ಪ್ರತಿಯೊಬ್ಬ ನಾಗರಿಕರನ್ನು ಡಿಜಿಟಲ್ ಪಾವತಿಗಳ ಬಳಕೆದಾರರನ್ನಾಗಿ ಮಾಡುವ ಗುರಿಯೊಂದಿಗೆ ಈ ಉಪಕ್ರಮಕ್ಕೆ ಬ್ಯಾಂಕ್ ಮುಂದಾಗಿದೆ(Har Payment Digital).
ಡಿಜಿಟಲ್ ಪೇಮೆಂಟ್ಸ್ ಅಳವಡಿಸಿಕೊಳ್ಳಿ ಮತ್ತು ಇನ್ನೊಬ್ಬರಿಗೆ ಕಳುಹಿಸಿ ಎಂಬುದು ಡಿಜಿಟಲ್ ಪಾವತಿಗಳ ಜಾಗೃತಿ ಸಪ್ತಾಹದ ಉದ್ದೇಶವಾಗಿದೆ. ಅಥವಾ ಥೀಮ್ ಎಂದೂ ಕರೆಯಬಹುದು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ಬಳಕೆ ನಾಗಾಲೋಟದಲ್ಲಿ ಹೆಚ್ಚಾಗುತ್ತಿದೆ. ಈ ದೇಶದ ನಾಗರಿಕರು ಡಿಜಿಟಲ್ ಪೇಮೆಂಟ್ಸ್ ಪದ್ಧತಿಯನ್ನು ಅಪ್ಪಿಕೊಂಡಿದ್ದಾರೆ. ವೇಗ, ಅನುಕೂಲ ಮತ್ತು ಭದ್ರತೆ ಕಾರಣಕ್ಕೆ ಹೆಚ್ಚು ಜನಪ್ರಿಯವಾಗಿದೆ. ಹೀಗಿದ್ದಾಗ್ಯೂ, ದೇಶದಲ್ಲಿ ಇನ್ನೂ ಒಂದಿಷ್ಟು ವರ್ಗವು ಈ ಡಿಜಿಟಲ್ ಪೇಮೆಂಟ್ಸ್ ಬಗ್ಗೆ ಅರಿವು ಹೊಂದಿಲ್ಲ ಮತ್ತು ಬಳಸುತ್ತಿಲ್ಲ ಎಂದು ಕೇಂದ್ರ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡಿಜಿಟಲ್ ಪೇಮೆಂಟ್ಸ್ ಬಳಕೆ ಸಂಬಂಧ ಆರ್‌ಬಿಐ ಸಮೀಕ್ಷೆಯನ್ನು ಕೈಗೊಂಡಿತ್ತು. ಈ ಸಮೀಕ್ಷೆಯಲ್ಲಿ ಸುಮಾರು 90 ಸಾವಿರ ಜನರು ಪಾಲ್ಗೊಂಡಿದ್ದರು. ಈ ಪೈಕಿ ಶೇ.42 ಜನರು ಡಿಜಿಟಲ್ ಪೇಮೆಂಟ್ಸ್ ಬಳಸುತ್ತಿರುವುದಾಗಿ ಹೇಳಿದ್ದರೆ, ಶೇ.35ರಷ್ಟು ಜನರು ಡಿಜಿಟಲ್ ಪೇಮೆಂಟ್ಸ್ ಬಗ್ಗೆ ಗೊತ್ತಿದ್ದರೂ ಬಳಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಶೇ.23ರಷ್ಟು ಜನರಿಗೆ ಡಿಜಿಟಲ್ ಪಾವತಿಯ ಬಗ್ಗೆ ಎಳ್ಳಷ್ಟೂ ತಿಳಿದಿಲ್ಲ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ಅಭಿಯಾನವನ್ನು ಕೈಗೊಂಡಿದೆ.
ಇದನ್ನೂ ಓದಿ: ದೇವರ ಹುಂಡಿಗೂ ಬಂತು ಡಿಜಿಟಲ್ ಪೇಮೆಂಟ್ ! ಈ ಕ್ರಾಂತಿ ನಡೆದ ಮೊದಲ ದೇಗುಲ ಯಾವುದು? ಇಲ್ಲಿ ನೋಡಿ…
ಈ ವಾರದಿಂದ ಆರ್‌ಬಿಐ ಬ್ಯಾಂಕ್‌ಗಳು ಮತ್ತು ಪಾವತಿ ವ್ಯವಸ್ಥೆಗಳ ಇತರ ಮಧ್ಯಸ್ಥಗಾರರ ಸಹಯೋಗದೊಂದಿಗೆ ಪ್ರಿಂಟ್, ದೂರದರ್ಶನ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡ ಬಹುಮಾದರಿಯ ಪ್ರಚಾರವನ್ನು ನಡಸಲಿದೆ. ಈ ಮೂಲಕ ಡಿಜಿಟಲ್ ಪೇಮೆಂಟ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ.