Site icon Vistara News

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Hardeep Singh Nijjar

Hardeep Singh Nijjar

ನವದೆಹಲಿ: ಖಲಿಸ್ತಾನಿ ಉಗ್ರ, ಖಲಿಸ್ತಾನಿ ಟೈಗರ್ ಫೋರ್ಸ್‌ನ (Khalistani Tiger Force) ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಗೀಡಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸಂಸತ್‌ನಲ್ಲಿಯೇ ಆತನಿಗೆ ‘ಮೌನಾಚರಣೆ’ ಮೂಲಕ ಗೌರವ ಸಲ್ಲಿಸಿದ ವಿಚಾರ ಪ್ರಪಂಚಾದ್ಯಂತ ಸುದ್ದಿಯಾಗಿತ್ತು. ಇದೀಗ ನಿಜ್ಜರ್‌ ಕುರಿತ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ವರದಿ ಪ್ರಕಾರ ನಿಜ್ಜರ್‌ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ಪಾಕಿಸ್ತಾನಕ್ಕೆ ಆಗಾಗ ಭೇಟಿ ಕೊಡುತ್ತಿದ್ದ. ಅಲ್ಲದೇ ಅಲ್ಲಿನ ಖಲಿಸ್ತಾನಿ ಉಗ್ರರನ್ನು ಭೇಟಿಯಾಗಿ ಭಾರತದ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಬಯಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಅವರು 1970ರಲ್ಲಿ ಪಂಜಾಬ್‌ನಲ್ಲಿ ಜನಿಸಿದ್ದ. ಆರಂಭದಲ್ಲಿ ಕಾನೂನಿನ ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಖಲಿಸ್ತಾನಿಗಳಿಗೆ ನಿಜ್ಜರ್‌ ಕುಟುಂಬ ಆಶ್ರಯ ಮತ್ತು ಆಹಾರವನ್ನು ನೀಡುತ್ತಿತ್ತು. ಅವರ ಒಡನಾಟದಿಂದಾಗಿ ನಿಜ್ಜರ್ ಖಲಿಸ್ತಾನಿ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತನಾಗಿದ್ದ ಮತ್ತು ಪ್ರತ್ಯೇಕ ಸಿಖ್ ರಾಷ್ಟ್ರವನ್ನು ಬೆಂಬಲಿಸಲು ಶುರು ಮಾಡುತ್ತಾನೆ.

1995ರಲ್ಲಿ ಪಂಜಾಬ್‌ನ ಆಗಿನ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದರು. ಖಲಿಸ್ತಾನಿ ಭಯೋತ್ಪಾದಕರು ಸಿಎಂ ಮತ್ತು ಇತರ 17 ಮಂದಿಯನ್ನು ಹತ್ಯೆ ಮಾಡಿದ ನಂತರ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಹಿಡಿಯಲು ಕೇಂದ್ರ ಸರ್ಕಾರ ಬೆನ್ಹತ್ತಿತ್ತು. ಈ ಪ್ರಕರಣದಲ್ಲಿ ನಿಜ್ಜರ್‌ ಕೂಡ ಭಾಗಿಯಾಗಿದ್ದ. ಇದಾದ ಬಳಿಕ ಹಿಂದೂ ವ್ಯಕ್ತಿಯ ನಕಲಿ ಗುರುತನ್ನು ಬಳಸಿಕೊಂಡು ನಿಜ್ಜರ್ ಭಾರತವನ್ನು ತಪ್ಪಿಸಿಕೊಂಡು ಕೆನಡಾಕ್ಕೆ ಓಡಿಹೋಗಿದ್ದ. ಅವರ ಪಾಸ್‌ಪೋರ್ಟ್‌ನಲ್ಲಿ ರವಿ ಶರ್ಮಾ ಹೆಸರಿತ್ತು. ಹಿಂದೂ ವ್ಯಕ್ತಿಯಂತೆ ಕಾಣಲು ಮತ್ತು ಸಿಖ್ ಗುರುತನ್ನು ಮರೆಮಾಚಲು ಅವರು ತಮ್ಮ ಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದ ಎಂದು ವರದಿಗಳು ಬಹಿರಂಗಪಡಿಸಿವೆ.

ಕೆನಡಾವನ್ನು ತಲುಪಿದ ನಂತರ, ಅವರು ಅಲ್ಲಿನ ಪೊಲೀಸರಿಂದ ಹಿಂಸಿಸಲ್ಪಟ್ಟಿದ್ದಾನೆ ಎಂದು ಹೇಳಿಕೊಂಡು ನಿರಾಶ್ರಿತರ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸಿದ್ದ. ಬಳಿಕ ಆತ ಕೆನಡಾದಲ್ಲಿ ವಾಸಿಸುವುದನ್ನು ಮುಂದುವರೆಸಿದ್ದ. ಕೊನೆಗೆ ಅಲ್ಲಿನ ಪೌರತ್ವ ಪಡೆಯುವಲ್ಲಿ ಯಶಸ್ವಿ ಆಗಿದ್ದ. ಅಲ್ಲಿ ಕೆಲವು ಕಾಲ ಕಳೆದು ಅಲ್ಲಿ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ಭಯೋತ್ಪಾದನಾ ಗುಂಪನ್ನು ನಿರ್ವಹಿಸುತ್ತಿದ್ದ. 2013ರಲ್ಲಿ ನಿಜ್ಜರ್ ಪಾಕಿಸ್ತಾನಕ್ಕೆ ತೆರಳಿ ತಾರಾ ಜತೆ ಕಾಲ ಕಳೆದಿದ್ದ. ಪಾಕಿಸ್ತಾನದ ಗುರುದ್ವಾರದ ಮೇಲ್ಭಾಗದಲ್ಲಿ ತಾರಾ ಜೊತೆ ನಿಜ್ಜರ್ ಕಾಣಿಸಿಕೊಂಡಿರುವ ಫೊಟೋಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿವೆ.

ತಾರಾ, ತನ್ನ ನಂತರ KTF ಅನ್ನು ವಹಿಸಿಕೊಳ್ಳಲು ನಿಜ್ಜರ್‌ನನ್ನು ನೇಮಿಸಲು ಮುಂದಾಗಿದ್ದ. ಆದರೆ, ನಿಜ್ಜರ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದ. ವರದಿ ಹೇಳಿದೆ. ನಂತರ, 2015 ರಲ್ಲಿ, ಅವರು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆಯ ಉಸ್ತುವಾರಿ ವಹಿಸುವಷ್ಟು ಬಲಿಷ್ಟವಾಗಿ ಬೆಳೆದಿದ್ದ.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೂಡ ಎನ್‌ಐಎ ಘೋಷಿಸಿತ್ತು.

ಇದನ್ನೂ ಓದಿ: Manoj Kalyane: ಬಿಜೆಪಿ ಮುಖಂಡ, ಮಧ್ಯ ಪ್ರದೇಶ ಸಚಿವರ ಆಪ್ತನ ಹತ್ಯೆ; ಬೈಕ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದುಷ್ಕರ್ಮಿಗಳು

Exit mobile version