“ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿ ಏನೂ ಕೆಲಸ ಮಾಡಿಲ್ಲ, ಹಾಗಾಗಿ ಅವರು ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ”, “ಪ್ರಧಾನಿ ಮೋದಿಯವರು ಜನರಿಗೆ ಸಂಬಂಧಿಸಿದ ನಿಜ ವಿಚಾರಗಳನ್ನು ಬಿಟ್ಟು ತಮ್ಮನ್ನು ತಾವು ಬಿಂಬಿಸಿಕೊಳ್ಳುವಲ್ಲೆ ನಿರತರಾಗಿದ್ದಾರೆ”. ಹೀಗೆ ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ವಿರುದ್ಧ ಹರಿಹಾಯುತ್ತಿದ್ದ ಗುರಜಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಈಗ ಬದಲಾಗಿದ್ದಾರೆ.
ಕೆಲವು ದಿನಗಳ ಹಿಂದಿನಿಂದ ಅವರ ಮಾತಿನ ಧಾಟಿಯನ್ನು ಗಮನಿಸಿದವರೆಲ್ಲರೂ, ಸದ್ಯದಲ್ಲೆ ಹಾರ್ದಿಕ್ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ಹೇಳುತ್ತಿರುವುದರಲ್ಲಿ ಅತಿಶಯೋಕ್ತಿ ಇಲ್ಲ. “ನಾವೆಲ್ಲರೂ ಸಾವಿರಾರು ವರ್ಷಗಳಿಂದ ಹಿಂದುತ್ವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ”, “ಜನರಿಗೆ ತಕ್ಕಂತೆ ಬಿಜೆಪಿ ಯೋಜನೆಗಳನ್ನು ರೂಪಿಸುತ್ತಿದೆ, ಅದಕ್ಕೇ ಜಯಗಳಿಸುತ್ತಿದೆ” ಎನ್ನುವಂತಹ ಮಾತುಗಳೇ ಇದಕ್ಕೆ ಸಾಕ್ಷಿ.
ಗುಜರಾತ್‌ನ ಪ್ರಬಲ ಪಾಟೀದಾರ್ ಸಮುದಾಯಕ್ಕೆ ಸೇರಿದವರಾದರೂ ಅತ್ಯಂತ ಬಡ ಕುಟುಂಬದಿಂದ ಬಂದವರು ಹಾರ್ದಿಕ್ ಪಟೇಲ್. ಈಗಿನ್ನೂ 28 ವರ್ಷದವರಿದ್ದು, ಈಲ್ಲಿವರೆಗೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಕಾಲೇಜು ದಿನಗಳಿಂದಲೂ ನಾಯಕತ್ವ ಗುಣ ಹೊಂದಿದ್ದ ಹಾರ್ದಿಕ್ ಜೀವನಕ್ಕೆ 2015 ಪ್ರಮುಖ ತಿರುವು ನೀಡಿತು. ತಮ್ಮ ಸಹೋದರಿ ಮೋನಿಕಾ ಒಂದು ಸರ್ಕಾರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ ಆ ವಿದ್ಯಾರ್ಥಿ ವೇತನ ನೀಡಲು ನಿರಾಕರಿಸಲಾಯಿತು. ಇದೇ ವೇಳೆ ಮೋನಿಕಾ ಸ್ನೇಹಿತೆಯೊಬ್ಬಳಿಗೆ ಇದೇ ವಿದ್ಯಾರ್ಥಿವೇತನ ಸಿಕ್ಕಿತು. ಅದರಲ್ಲೂ ಆಕೆ ಮೋನಿಕಾಗಿಂತ ಕಡಿಮೆ ಅಂಕ ಗಳಿಸಿದ್ದಳು. ಆಕೆಗೆ ಈ ವಿದ್ಯಾರ್ಥಿವೇಥನ ದೊರಕಲು ಕಾರಣವಾಗಿದ್ದು ಆಕೆ ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ಸೇರಿದವಳು ಎಂಬ ಕಾರಣಕ್ಕೆ. ಈ ಘಟನೆ ಹಾರ್ದಿಕ್ ಮೇಲೆ ಭಾರೀ ಪರಿಣಾಮ ಬೀರಿತು.
ಸಾಮಾಜಿಕ ನ್ಯಾಯ ನೀಡಿಕೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಮಾಡಲೇಬೇಕು ಎಂದು ಪಾಟೀದಾರ್ ಸಮುದಾಯವನ್ನೂ ಒಬಿಸಿಗೆ ಸೇರಿಸಬೇಕು ಎಂಬ ಹೋರಾಟ ಆರಂಭಿಸಿದರು. ಪ್ರಾರಂಭದಲ್ಲಿ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ(PAAS) ಮೂಲಕ ಪ್ರಾರಂಭವಾದ ಚಳವಳಿ ವ್ಯಾಪಕ ರೂಪ ತಳೆಯಿತು. ಹೋರಾಟದ ವೇಳೆ ಬಂಧನ, ಮೆಹಸಾನಾದಲ್ಲಿ ಗಲಭೆಗೆ ಸಂಬಂಧಿಸಿ ಚುನಾವಣೆಯಿಂದ ಬಹಿಷ್ಕಾರಕ್ಕೆ ಕಾರಣವಾಯಿತು.
ಆನಂತರದಲ್ಲಿಯೂ ನಿರಂತರ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದ ಪಟೇಲ್ 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕು ಎಂಬ ಉದ್ದೇಶದೊಂದಿಗೆ 2019ರಲ್ಲಿ ಕಾಂಗ್ರೆಸ್ ಸೇರ್ಪಡೆ ಆದರು. ಅವರನ್ನು ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿಯೂ ನೇಮಕ ಮಾಡಲಾಯಿತು.
ರಾಜ್ಯ ಘಟಕದೊಂದಿಗೆ ಅಪಸ್ವರ
ಅದೇಕೊ ಕೆಲ ದಿನಗಳಿಂದ ಹಾರ್ದಿಕ್ ಪಟೇಲ್ ಧ್ವನಿ ಬದಲಾಗಿದೆ. ಕಾಂಗ್ರೆಸ್‌ನಲ್ಲಿ ನಾನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ವರನಂತೆ ಆಗಿದ್ದೇನೆ ಎಂದಿದ್ದರು. ಇದರ ಜತೆಗೇ, ನಾನೊಬ್ಬ ಅಪ್ಪಟ ಹೆಮ್ಮೆಯ ಹಿಂದು. ಬಿಜೆಪಿ, ಆಪ್ ಸೇರಿ ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿಸಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು.
ತಮ್ಮ ಮಾತನ್ನು ಇನ್ನೂ ಮುಂದುವರಿಸಿದ ಪಟೇಲ್, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವಂತಹ ಬಿಜೆಪಿ ನಿರ್ಧಾರ ಸ್ವಾಗತಾರ್ಹವಾದದ್ದು. ಈಂತಹ ನಿರ್ಧಾರಗಳ ಮೂಲಕವೇ ಜನರ ವಿಶ್ವಾಸ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿದೆ. ಕಾಂಗ್ರೆಸ್ ಮಾತ್ರ ಓಬೀರಾಯನ ನೀತಿಗಳಿಗೆ ಜೋತು ಬಿದ್ದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಜನರಿಂದ ದೂರಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನ ನಡೆಯುತ್ತಿಲ್ಲ. ನಾಯಕರು ತಮ್ಮಷ್ಟಕ್ಕೆ ತಾವು ಕಚ್ಚಾಡಿಕೊಳ್ಳುವುದರಲ್ಲೆ ನಿರತರಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ರಾಹುಲ್ ಗಾಂಧಿ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಯುವ ನಾಯಕರಿಗೆ ಆದ್ಯತೆ ನೀಡದಿದ್ದರೆ ಜನರಿಗೆ ಕಾಂಗ್ರೆಸ್ ಹೊರೆಯಾಗಲಿದೆ ಎಂದು ತಮ್ಮ ಮಾತನ್ನು ಮುಂದುವರಿಸಿದ್ದರು.
ಹಾರ್ದಿಕ್ ಪಟೀಲ್ ಹೇಳಿಕೆ ಬೆನ್ನಲ್ಲೆ ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗೋಪಾಲ್ ಇತಾಲಿಯಾ ಪ್ರತಿಕ್ರಿಯಿಸಿ, ತಮ್ಮ ಪಕ್ಷಕ್ಕೆ ಹಾರ್ದಿಕ್ ಪಟೇಲ್ ಅವರನ್ನು ಸ್ವಾಗತಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಸಿ.ಆರ್. ಪಟೇಲ್ ಈ ರೀತಿ ಸ್ವಾಗತ ಮಾಡಿಲ್ಲವಾದರೂ, ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ಹಾರ್ದಿಕ್ ಪಟೇಲರಂತಹ ಯುವ ನಾಯಕರು ಹೊಗಳುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದಿದ್ದಾರೆ.
ಸದ್ಯಕ್ಕೆ ಬಿಜೆಪಿ ಸೇರಲ್ಲ
ಅನೇಕ ಹೇಳಿಕೆಗಳ ನಂತರ, ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳ ಕುರಿತು ಹಾರ್ದಿಕ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಪಟೇಲ್, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸೇರುವ ಯಾವುದೇ ಸನ್ನಿವೇಶ ಇಲ್ಲ. ನಾವು ಶತೃಗಳ ಶಕ್ತಿಯನ್ನು ಅರಿಯಬೇಕು. ಬಿಜೆಪಿ ಮಾಡಿದ ಉತ್ತಮ ನಿರ್ಧಾರಗಳನ್ನು ಹೊಗಳಿದ್ದೇನೆ. ಅಷ್ಟು ಮಾತ್ರಕ್ಕೇ ತಾನು ಬಿಜೆಪಿ ಸೇರ್ಪಡೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷದ ಕುರಿತು ನನ್ನ ಕಾಳಜಿಯನ್ನು ಹೈಕಮಾಂಡ್ ಕೇಳಿಸಿಕೊಳ್ಳುತ್ತದೆ ಎಂದು ಈಗಲೂ ವಿಶ್ವಾಸ ಇರುವುದಾಗಿ ತಿಳಿಸಿದ್ದಾರೆ.
2017ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆಗಳು ನಡೆದಿದ್ದವು. 2022ರ ಡಿಸೆಂಬರ್ ವೇಳೆಗೆ ಚುನಾವಣೆ ಎದುರಾಗಲಿದೆ. ಈಗಾಗಲೆ ಗುಜರಾತ್ ಚುನಾವಣಾ ಕಣ ರಂಗೇರಲು ಆರಂಭವಾಗಿದೆ. ಸದ್ಯಕ್ಕಂತೂ ಬಿಜೆಪಿ ಸೇರುವುದಿಲ್ಲ ಎಂದು ಪಟೇಲ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುವ ಮೂಲಕವೂ ತಾವಿನ್ನೂ ಕಾಂಗ್ರೆಸ್‌ನಲ್ಲೇ ಇದ್ದೀನಿ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಆದರೆ ತಮ್ಮ ಇಚ್ಚೆಗೆ ಅನುಸಾರವಾಗಿ ಕಾಂಗ್ರೆಸ್‌ನಲ್ಲಿ ಬದಲಾವಣೆಗಳಾಗುತ್ತವೆ ಎಂಬ ಯಾವುದೇ ಖಾತ್ರಿ ಇಲ್ಲ. ಅತ್ಯಂತ ಕ್ರಿಯಾಶೀಲನಾಗಿರುವ ಯುವ ನಾಯಕ, ಈ ವಾತಾವರಣ ಬದಲಾಗದಿದ್ದರೆ ಕಾಂಗ್ರೆಸ್‌ನಲ್ಲೇ ಉಳಿಯುವುದು ಬಹುತೇಕ ಅಸಾಧ್ಯ. ಬಿಜೆಪಿಗೆ ಅಲ್ಲದಿದ್ದರೂ ಡಿಸೆಂಬರ್ ಚುನಾವಣೆ ವೇಳೆಗೆ ಆಮ್ ಆದ್ಮಿ ಪಾರ್ಟಿಗಾದರೂ ಸೇರ್ಪಡೆ ಆಗುವುದು ಬಹುತೇಕ ನಿಶ್ಚಯ ಎನ್ನುವಂತೆ ಕಾಣುತ್ತಿದೆ.