Site icon Vistara News

Congress MLA: ಕಾಂಗ್ರೆಸ್‌ ಶಾಸಕನಿಗೆ ಇ.ಡಿ ಶಾಕ್;‌ 5 ಕೋಟಿ ರೂ. ಜಪ್ತಿ, ಶಸ್ತ್ರಾಸ್ತ್ರ ವಶ

surender panwar

Haryana Congress MLA Raided, Rs 5 Crore Cash, 300 Bullets, Liquor Bottles Seized

ಚಂಡೀಗಢ: ಹರಿಯಾಣದಲ್ಲಿ ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಶಾಸಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 5 ಕೋಟಿ ರೂ. ನಗದು (Cash), ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಶಸ್ತ್ರಾಸ್ತ್ರಗಳು (Weapons) ಹಾಗೂ ಭಾರಿ ಪ್ರಮಾಣದ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಕಾನೂನುಬಾಹಿರವಾಗಿ ಗಣಿಗಾರಿಕೆಯಲ್ಲಿ (Illegal Mining) ತೊಡಗಿರುವ ಇಬ್ಬರೂ ಭಾರಿ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಇವರಿಗೆ ಇ.ಡಿ ಅಧಿಕಾರಿಗಳು ದಾಳಿ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಕಾಂಗ್ರೆಸ್‌ ಶಾಸಕ ಸುರೇಂದರ್‌ ಪನ್ವಾರ್‌ ಹಾಗೂ ಇಂಡಿಯನ್‌ ನ್ಯಾಷನಲ್‌ ಲೋಕದಳ ಪಕ್ಷದ ಮಾಜಿ ಶಾಸಕ ದಿಲ್‌ಬಾಗ್‌ ಸಿಂಗ್‌ ಅವರ ನಿವಾಸಗಳು, ಕಚೇರಿಗಳು ಸೇರಿ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆಯಲ್ಲಿ ತೊಡಗಿರುವ ಇವರ ಆಪ್ತರ ಮನೆಗಳಲ್ಲೂ ಇ.ಡಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ. ಸುಮಾರು 15-20 ಇ.ಡಿ ಅಧಿಕಾರಿಗಳು ಗುರುವಾರ (ಜನವರಿ 4) ಸಂಜೆಯಿಂದಲೇ ಆರು ವಾಹನಗಳಲ್ಲಿ ದಾಳಿ ನಡೆಸಿದ್ದಾರೆ.

ಸುರೇಂದರ್‌ ಪನ್ವಾರ್‌ ಅವರು ಗಣಿಗಾರಿಕೆ ಮಾಡುತ್ತಿದ್ದು, ಇತ್ತೀಚೆಗೆ ಕಾನೂನುಬಾಹಿರವಾಗಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ದಾಳಿಯ ವೇಳೆ ಮನೆಗಳಲ್ಲಿದ್ದ ಸಂಬಂಧಿಕರು ಹಾಗೂ ಕೆಲಸಗಾರರ ಫೋನ್‌ಗಳನ್ನು ಕೂಡ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸುರೇಂದರ್‌ ಪನ್ವಾರ್‌ ಅವರು ಸೋನಿಪತ್‌ ಶಾಸಕರಾಗಿದ್ದಾರೆ. ಇ.ಡಿ ಅಧಿಕಾರಿಗಳು ಯಮುನಾ ನಗರ, ಸೋನಿಪತ್‌, ಮೊಹಾಲಿ, ಫರೀದಾಬಾದ್‌, ಚಂಡೀಗಢ ಹಾಗೂ ಕರ್ನಾಲ್‌ನಲ್ಲಿ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Arvind Kejriwal: 3ನೇ ಬಾರಿಯೂ ಇ.ಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು, ಮುಂದೇನಾಗುತ್ತದೆ?

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದ ಹಲವೆಡೆ ಇ.ಡಿ ಅಧಿಕಾರಿಗಳು ಶುಕ್ರವಾರ (ಜನವರಿ 5) ದಾಳಿ ನಡೆಸಿದ್ದ ವೇಳೆ ಅಧಿಕಾರಿಗಳ ವಾಹನದ ಮೇಲೆಯೇ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಪಡಿತರ ವಿತರಣೆ ವೇಳೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದರು. ಆದರೆ, ಇದೇ ಪ್ರಕರಣದಲ್ಲಿ ಟಿಎಂಸಿ ಸ್ಥಳೀಯ ಮುಖಂಡ ಶಹಜಹಾನ್ ಶೇಖ್‌ ಎಂಬುವರ ಮನೆಯ ಮೇಲೆ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದರು ಇದೇ ವೇಳೆ, ಇ.ಡಿ ಅಧಿಕಾರಿಗಳ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿದ್ದರು. ದಾಳಿಯಲ್ಲಿ ಇ.ಡಿ ಕೆಲ ಅಧಿಕಾರಿಗಳಿಗೆ ಗಾಯಗಳಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version