Site icon Vistara News

Haryana Violence: ನುಹ್‌ ಹಿಂಸಾಚಾರದಲ್ಲಿ ಭಾಗಿಯಾದವರ ಮನೆಗಳು ನೆಲಸಮ

Buldozer

ಹರಿಯಾಣ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ (yogi Adityanath) ಅವರ ʼಬುಲ್ಡೋಜರ್ ನ್ಯಾಯʼ (Bulldozer Justice) ವ್ಯವಸ್ಥೆಯನ್ನು ಹರಿಯಾಣ ಸರ್ಕಾರ ಕೂಡ ಅಳವಡಿಸಿಕೊಂಡಿದ್ದು, ಕೋಮು ಗಲಭೆಯಲ್ಲಿ (Haryana Violence) ಭಾಗಿಯಾದವರ ಗುಡಿಸಲುಗಳನ್ನು ಕೆಡವಿಹಾಕಿದೆ.

ಹರಿಯಾಣದ ನುಹ್‌ನ ತೌರು ಎಂಬಲ್ಲಿರುವ ಅಕ್ರಮ ವಲಸಿಗರ 250 ಗುಡಿಸಲುಗಳನ್ನು ಸ್ಥಳೀಯ ಸಂಸ್ಥೆಗಳ ಆಡಳಿತ ಬುಲ್ಡೋಜ್‌ ಮಾಡಿದೆ. ಇವುಗಳಲ್ಲಿ ಹೆಚ್ಚಿನವು ಇತ್ತೀಚಿನ ಕೋಮು ಹಿಂಸಾಚಾರದಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿವೆ. ಈ ಗುಡಿಸಲುಗಳು ಕಳೆದ ನಾಲ್ಕು ವರ್ಷಗಳಿಂದ ತಲೆಯೆತ್ತಿವೆ. ಎಚ್‌ಎಸ್‌ವಿಪಿ ಭೂಮಿಯಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಇವು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ವಲಸಿಗರದು ಎಂದು ತಿಳಿದುಬಂದಿದೆ.

ಜಿಲ್ಲೆಯ ಅಧಿಕಾರಿಗಳು ಭಾರೀ ಪೊಲೀಸ್ ಪಡೆಗಳೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಿದರು. ನಂತರ ಗುಡಿಸಲುಗಳು ಅಕ್ರಮ ಎಂದು ಪ್ರತಿಪಾದಿಸಿದ್ದಾರೆ. ತೌರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸಿದ, ಅಂಗಡಿಗಳು ಮತ್ತು ಜನರ ಮೇಲೆ ದಾಳಿ ಮಾಡಿದ ಹೆಚ್ಚಿನ ದುಷ್ಕರ್ಮಿಗಳು ಈ ಕೊಳೆಗೇರಿಗಳಿಂದ ಬಂದವರು. ಅವರ ಕೃತ್ಯಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ಸ್ಥಳೀಯ ಪೊಲೀಸರು ಕಲ್ಲು ತೂರಾಟ ನಡೆಸಿದವರನ್ನು ಗುರುತಿಸಿದ್ದಾರೆ ಮತ್ತು ಇವರ ಮನೆಗಳನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಪೊಲೀಸ್ ಯೋಜನೆಯ ಪ್ರಕಾರ, ನಲ್ಹಾರ್ ಗ್ರಾಮ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಇದೇ ರೀತಿಯ ಉಪಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯೂ ದುಷ್ಕರ್ಮಿಗಳು ವಿಎಚ್‌ಪಿ ಯಾತ್ರೆಯ ಮೇಲೆ ದಾಳಿ ಮಾಡಿ ವಾಹನಗಳನ್ನು ಸುಟ್ಟುಹಾಕಿದ್ದಾರೆ. ನುಹ್‌ನ ವಿವಿಧ ಭಾಗಗಳಲ್ಲಿ ಇದುವರೆಗೆ 50ಕ್ಕೂ ಹೆಚ್ಚು ಅಕ್ರಮ ಆಸ್ತಿಗಳನ್ನು ಹೀಗೆ ಗುರುತಿಸಲಾಗಿದೆ.

ಇಲ್ಲಿಯವರೆಗೆ, ಸ್ಥಳೀಯ ಅಧಿಕಾರಿಗಳು ಹಿಂಸಾಚಾರದ ಕುರಿತು ವಿಡಿಯೊಗಳನ್ನು ಆಧರಿಸಿದ 45 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ನುಹ್‌ನಲ್ಲಿ ಇದುವರೆಗೆ 139 ಜನರನ್ನು ಬಂಧಿಸಲಾಗಿದೆ. ಮೇವ್ಲಿ, ಶಿಕರ್‌ಪುರ, ಜಲಾಲ್‌ಪುರ ಮತ್ತು ಶಿಂಗಾರ್‌ನಂತಹ ಗ್ರಾಮಗಳಲ್ಲಿ ಕೂಂಬಿಂಗ್ ನಡೆಸಲಾಗಿದೆ. ಸೈಬರ್ ತಜ್ಞರ ವಿಶೇಷ ತಂಡವು ಯಾತ್ರೆಯ ಮಾರ್ಗದಲ್ಲಿ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ತೆಗೆದುಕೊಂಡಿದೆ. ಗುರುವಾರ ನುಹ್ ಮತ್ತು ಗುರುಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ನುಹ್‌ನಲ್ಲಿ ಎರಡು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಯಿತು. ನುಹ್, ಗುರುಗ್ರಾಮ್, ಫರಿದಾಬಾದ್ ಮತ್ತು ಪಲ್ವಾಲ್‌ನಲ್ಲಿ ಮೂರು ಗಂಟೆ ಇಂಟರ್ನೆಟ್ ಸೇವೆ ಮರುಸ್ಥಾಪಿಸಲಾಗಿದೆ. ಈಗ ಹರಿಯಾಣದ 10 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.

ಇದನ್ನೂ ಓದಿ: Haryana Violence: ಹರ್ಯಾಣದ ಗಲಭೆಗೆ ಕಾರಣನಾಗಿರುವ ಮೋನು ಮನೇಸರ್ ಯಾರು?

Exit mobile version