Site icon Vistara News

Hathras Stampede: ಹತ್ರಾಸ್‌ ಕಾಲ್ತುಳಿತದಿಂದ ತೀವ್ರ ದುಃಖವಾಗಿದೆ ಎಂದ ಭೋಲೆ ಬಾಬಾ; Video ಇಲ್ಲಿದೆ

Hathras Stampede

Hathras Stampede

ಲಖನೌ: ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್‌ ಕಾಲ್ತುಳಿತ (Hathras Stampede) ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ, ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಇದೀಗ ಮಾಧ್ಯಮದ ಜತೆ ಮಾತನಾಡಿ, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಸತ್ಸಂಗ ಕಾರ್ಯಕ್ರಮ ಬಳಿಕ ನಡೆದ ಈ ಘಟನೆಯಿಂದ ತೀವ್ರ ದುಃಖಿತನಾಗಿ ಖಿನ್ನತೆಗೆ ಜಾರಿರುವುದಾಗಿ ಅವರು ತಿಳಿಸಿದ್ದಾರೆ.

ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಎಂದು ಗುರುತಿಸಿಕೊಂಡಿರುವ ಸೂರಜ್‌ಪಾಲ್‌ ಅವರು ಕಾಲ್ತುಳಿತದ ಪ್ರಮುಖ ಆರೋಪಿ ದೇವ್‌ಪ್ರಕಾಶ್ ಮಧುಕರ್ ನವದೆಹಲಿಯಲ್ಲಿ ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ ಶನಿವಾರ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದರು. ನಂತರ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭೋಲೆ ಬಾಬಾ ಹೇಳಿದ್ದೇನು?

ʼʼಜುಲೈ 2ರಂದು ನಡೆದ ಕಾಲ್ತುಳಿತದ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಆ ದೇವರು ನಮಗೆಲ್ಲ ಈ ದುಃಖದಿಂದ ಹೊರ ಬರುವ ಶಕ್ತಿ ನೀಡಲಿ. ಸರ್ಕಾರ ಮತ್ತು ಆಡಳಿತ ಮೇಲೆ ನಂಬಿಕೆ ಇಡಿ. ಗೊಂದಲ, ಕಾಲ್ತುಳಿತಕ್ಕೆ ಕಾರಣರಾದವರನ್ನು ಕಾನೂನು ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ವಕೀಲ ಎ.ಪಿ.ಸಿಂಗ್ ಅವರ ಮೂಲಕ, ದುಃಖಿತ ಕುಟುಂಬಗಳು ಮತ್ತು ಗಾಯಗೊಂಡವರ ಜತೆ ನಿಲ್ಲಲು ಮತ್ತು ಅವರಿಗೆ ಸಹಾಯ ಮಾಡಲು ನಾನು ಸಮಿತಿಯ ಸದಸ್ಯರಲ್ಲಿ ಮನವಿ ಮಾಡುತ್ತಿದ್ದೇನೆ” ಎಂದು ಭೋಲೆ ಬಾಬಾ ಹೇಳಿದ್ದಾರೆ.

ಮುಖ್ಯ ಆರೋಪಿಯ ಬಂಧನ

ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ (Devprakash Madhukar)ನನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ʼʼದೆಹಲಿಯಲ್ಲಿದ್ದ ದೇವಪ್ರಕಾಶ್‌ ಮಧುಕರ್‌ ಶರಣಾಗಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆʼʼ ಎಂದು ಅವರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ. ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ (Bhole Baba) ಅವರ ಸತ್ಯಂಗದ ಮುಖ್ಯ ಸೇವಾದಾರ ಮಧುಕರ್‌ ವಿರುದ್ಧ ಹತ್ರಾಸ್‌ನ ಸಿಕಂದ್ರ ರಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್‌ ಮಧುಕರ್‌) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಕೀಲರೂ ಆದ ಎ.ಪಿ.ಸಿಂಗ್ ತಾನು ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರವಾಗಿ ವಾದಿಸುತ್ತೇನೆ ಎಂದು ಹೇಳಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ನ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ 2 ದಿನಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Exit mobile version