Site icon Vistara News

Hathras Stampede: ಹತ್ರಾಸ್‌ ಕಾಲ್ತುಳಿತ; ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Hathras Stampede

Hathras Stampede

ನವದಹಲಿ: ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್‌ ಕಾಲ್ತುಳಿತ (Hathras Stampede) ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ (Devprakash Madhukar)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ʼʼದೆಹಲಿಯಲ್ಲಿದ್ದ ದೇವಪ್ರಕಾಶ್‌ ಮಧುಕರ್‌ ಶರಣಾಗಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆʼʼ ಎಂದು ಅವರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ.

ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ (Bhole Baba) ಅವರ ಸತ್ಯಂಗದ ಮುಖ್ಯ ಸೇವಾದಾರ ಮಧುಕರ್‌ ವಿರುದ್ಧ ಹತ್ರಾಸ್‌ನ ಸಿಕಂದ್ರ ರಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್‌ ಮಧುಕರ್‌) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

“ಹತ್ರಾಸ್ ಪ್ರಕರಣದ ಎಫ್ಐಆರ್‌ನಲ್ಲಿ ಹೆಸರು ದಾಖಲಾದ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೆಹಲಿಯ ಪೊಲೀಸರು, ಎಸ್ಐಟಿ ಮತ್ತು ಎಸ್‌ಟಿಎಫ್‌ಗೆ ಈ ವಿಷಯ ತಿಳಿಸಿ ಬಳಿಕ ಶರಣಾಗಿದ್ದಾರೆ” ಎಂದು ಎ.ಪಿ.ಸಿಂಗ್ ಹೇಳಿದರು.

“ನಾವು ಯಾವುದೇ ತಪ್ಪು ಮಾಡದ ಕಾರಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ನಮ್ಮ ಅಪರಾಧವೇನು? ದೇವಪ್ರಕಾಶ್‌ ಮಧುಕರ್‌ ಎಂಜಿನಿಯರ್ ಮತ್ತು ಹೃದ್ರೋಗಿ. ಈಗ ಅವರ ಸ್ಥಿತಿ ಸುಧಾರಿಸಿದೆ. ಈ ಹಿನ್ನಲೆಯಲ್ಲಿ ಅವರು ಶರಣಾಗಿದ್ದಾರೆ” ಎಂದು ಎ.ಪಿ.ಸಿಂಗ್ ತಿಳಿಸಿದರು. ಪೊಲೀಸರು ಈಗ ಅವರ ಹೇಳಿಕೆಯನ್ನು ದಾಖಲಿಸಬಹುದು ಅಥವಾ ಪ್ರಶ್ನಿಸಬಹುದು. ಆದರೆ ಅವರ ಆರೋಗ್ಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದೂ ಸೂಚಿಸಿದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಕೀಲರೂ ಆದ ಎ.ಪಿ.ಸಿಂಗ್ ತಾನು ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರವಾಗಿ ವಾದಿಸುತ್ತೇನೆ ಎಂದು ಹೇಳಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ನ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ಕೊಡುವುದಾಗಿ 2 ದಿನಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ: Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

ಇದುವರೆಗೆ ಭೋಲೆ ಬಾಬಾ ಅವರ ಸತ್ಸಂಗದ ಸಂಘಟನಾ ಸಮಿತಿಯ ಸದಸ್ಯರಾಗಿದ್ದ ಇಬ್ಬರು ಮಹಿಳಾ ಸ್ವಯಂಸೇವಕರು ಸೇರಿದಂತೆ ಆರು ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. “ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Exit mobile version