Site icon Vistara News

Hathras Stampede: ಹತ್ರಾಸ್‌ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸ್ಥಳದಲ್ಲೇ ಸಾವು

Hathras Stampede

Hathras Stampede

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, ಸುಮಾರು 121 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಹೆಣಗಳ ರಾಶಿ ನೋಡಿ ಆಘಾತಗೊಂಡ ಕರ್ತವ್ಯ ನಿರತ ಪೊಲೀಸ್‌ ಒಬ್ಬರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಮೃತ ಪೊಲೀಸ್‌ನನ್ನು ರಜನೀಶ್‌ ಎಂದು ಗುರುತಿಸಲಾಗಿದೆ.

ಹತ್ರಾಸ್‌ನ ಸಿಕಂದರ್‌ರಾವ್‌ ಪ್ರದೇಶದ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ಆಯೋಜಿಸಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿತು. ಮೃತದೇಹಗಳನ್ನು ಇಟಾಹ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಅವರು ಇಂದು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.

ಪರಿಹಾರ ಘೋಷಣೆ

ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತಿತರ ನಾಯಕರು ಮೃತರ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಕಾರಣ ಏನು?

ದುರಂತ ಯಾಕಾಗಿ ನಡೆಯಿತು ಎನ್ನುವ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸತ್ಸಂಗ ಆಯೋಜಿಸಿದ್ದ ಜಾಗ ಇಕ್ಕಟ್ಟಿನಿಂದ ಕೂಡಿತ್ತು. ಅಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿಲ್ಲ. ಜನಸಮೂಹವು ಹೊರಡಲು ಪ್ರಾರಂಭಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ ಎಂದು ಸತ್ಸಂಗದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ. ಸತ್ಸಂಗದ ನಂತರ ಭಕ್ತರು ಭೋಲೆ ಬಾಬಾ ಅವರ ಪಾದಗಳನ್ನು ಮುಟ್ಟಲು ಧಾವಿಸಿದರು. ಇದರಿಂದಾಗಿ ಒಮ್ಮೆಲೆ ದೊಡ್ಡ ಜನಸಂದಣಿ ಸೃಷ್ಟಿಯಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಂದ ಭಕ್ತರು ಸತ್ಸಂಗಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: Stampedes in India: ದೇಶದಲ್ಲಿ ಈ ಹಿಂದೆಯೂ ನಡೆದಿವೆ ಭಾರೀ ಕಾಲ್ತುಳಿತ ದುರಂತ; ಇಲ್ಲಿದೆ ಲಿಸ್ಟ್‌

ಹತ್ರಾಸ್‌ನಲ್ಲಿ ಸತ್ಸಂಗ ಆಯೋಜಿಸಿದ್ದ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80,000 ಜನರಿಗೆ ಅನುಮತಿ ನೀಡಲಾಗಿತ್ತಾದರೂ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಎಫ್ಐಆರ್ ತಿಳಿಸಿದೆ. ನಾಪತ್ತೆಯಾದ ಭೋಲೆ ಬಾಬಾ ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Exit mobile version