Site icon Vistara News

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Hathras Stampede

Hathras Stampede

ಲಖನೌ: ಉತ್ತರಪ್ರದೇಶದ ಹತ್ರಾಸಕ್ಕೆ ಇಂದು (ಜುಲೈ 5) ಲೋಕಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಭೇಟಿ ನೀಡಲಿದ್ದು, ಜುಲೈ 2ರಂದು ನಡೆದ ಕಾಲ್ತುಳಿತ (Hathras Stampede)ದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಕಾಲ್ತುಳಿತಕ್ಕಿ ಸಿಲುಕಿ ಮೃತಪಟ್ಟಪಟ್ಟವರ ಸಂಖ್ಯೆ 123ಕ್ಕೆ ಏರಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ವಿವರಿಸಿದೆ.

ತಲೆ ಮರೆಸಿಕೊಂಡಿರುವ ಭೋಲೆ ಬಾಬಾ

ಘಟನೆ ನಡೆದ ಬಳಿಕ ಭೋಲೆ ಬಾಬಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಭೋಲೆ ಬಾಬಾ ಅವರು ತಮ್ಮ ಮೈನ್ಪುರಿಯ ಆಶ್ರಮದಲ್ಲಿಯೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಭೋಲೆ ಬಾಬಾ ಅವರ ವಕೀಲರು ಮಾತನಾಡಿ, ʼʼಅವರು (ಭೋಲೆ ಬಾಬಾ) ಎಲ್ಲಿದ್ದಾರೆಂದು ತಿಳಿದಿಲ್ಲ. ಈ ದುರಂತಕ್ಕೆ ಅವರು ಕಾರಣರಲ್ಲ. ಅವರು ಕಾನೂನಿನ ಕಣ್ಣು ತಪ್ಪಿಸಿ ಓಡಾಡುವುದಿಲ್ಲ. ಅವು ಸಂವಿಧಾನವದಲ್ಲಿ ನಂಬಿಕೆ ಇರಿಸಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಪತ್ತೆಯಾದರೆ ಖಂಡಿತವಾಗಿತಯೂ ನಿಮಗೆ ತಿಳಿಸುತ್ತೇನೆʼʼ ಎಂದು ಭೋಲೆ ಬಾಬಾ ಅವರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಭೋಲೆ ಬಾಬಾ ಅಜ್ಞಾತ ಸ್ಥಳದಿಂದ ಹೇಳಿಕೆ ಬಿಡುಗಡೆ ಮಾಡಿ, ಕಾಲ್ತುಳಿತಕ್ಕೆ ಸಮಾಜಘಾತಕ ಶಕ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. “ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Exit mobile version