Site icon Vistara News

Hathras Stampede: 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಆಸ್ತಿ ಧ್ವಂಸಕ್ಕೆ ಮುಂದಾದ ಯೋಗಿ!

Hathras Stampede

Hathras Stampede: Uttar Pradesh Government Planning Massive Crackdown On Assets Of Bhole Baba

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ (Hathras Stampede) ಸುಮಾರು 121 ಜನರು ಸಾವಿಗೀಡಾಗಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಭೋಲೆ ಬಾಬಾ ಹಲವು ಅಕ್ರಮಗಳು ಕೂಡ ಬಯಲಾಗಿವೆ. ಇವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌ ಕೂಡ ದಾಖಲಾಗಿದೆ. ಈ ಮಧ್ಯೆಯೇ, ಭೋಲೆ ಬಾಬಾ ಅವರ ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಹೌದು, ಉತ್ತರ ಪ್ರದೇಶದ ಹಲವೆಡೆ ಭೋಲೆ ಬಾಬಾ ಅವರಿಗೆ ಸಂಬಂಧಿಸಿದ ಹತ್ತಾರು ಕಟ್ಟಡಗಳಿದ್ದು, ಇವುಗಳು ಅಕ್ರಮವಾಗಿ ನಿರ್ಮಿಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಹಾಗೆಯೇ, ಭೋಲೆ ಬಾಬಾ ಆಸ್ತಿ, ಹಣದ ಕುರಿತು ಕೂಡ ಉತ್ತರ ಪ್ರದೇಶ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೊಂದು ವೇಳೆ, ಭೋಲೆ ಬಾಬಾ ಅಕ್ರಮ ಆಸ್ತಿ ಸಿಕ್ಕರೆ, ಅದನ್ನು ಧ್ವಂಸಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕ್ರಿಮಿನಲ್‌ಗಳು, ಅತ್ಯಾಚಾರಿಗಳ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಇದೇ ಕಾರಣಕ್ಕಾಗಿ ಯೋಗಿ ಆದಿತ್ಯನಾಥ್‌ ಅವರನ್ನು ಬುಲ್ಡೋಜರ್‌ ಬಾಬಾ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ 13 ಎಕರೆ “ಪಂಚತಾರಾ” ಆಶ್ರಮದ ಜಮೀನಿನ ಮೌಲ್ಯ 4 ಕೋಟಿ ರೂ. ಎಂಬುದಾಗಿ ತಿಳಿದುಬಂದಿದೆ. ಇನ್ನು ಮೈನ್ಪುರಿ ಆಶ್ರಮವು ಪಂಚತಾರಾ ಹೋಟೆಲ್‌ನಲ್ಲಿರುವ ಸೌಲಭ್ಯಗಳನ್ನು ಹೊಂದಿವೆ ಎನ್ನಲಾಗಿದೆ. ಈ ಆಶ್ರಮದಲ್ಲಿ ವಾಸವಾಗಿದ್ದ, ದೇವತಾಮಾನವ ಎಂದು ಕರೆಯುವ ಬಾಬಾರಿಗೆ ಈ ಆಶ್ರಮದಲ್ಲಿ ಆರು ಕೊಠಡಿಗಳನ್ನು ಮೀಸಲಿಡಲಾಗಿದೆ. ಇನ್ನೂ ಆರು ಕೊಠಡಿಗಳನ್ನು ಸಮಿತಿಯ ಸದಸ್ಯರು ಮತ್ತು ಅವರ ಸಂಸ್ಥೆಯ ಸ್ವಯಂಸೇವಕರಿಗೆ ಮೀಸಲಿಡಲಾಗಿದೆ. ಆಶ್ರಮವು ಖಾಸಗಿ ರಸ್ತೆಯನ್ನು ಮಾತ್ರವಲ್ಲದೆ ಅತ್ಯಾಧುನಿಕ ಕೆಫೆಟೇರಿಯಾವನ್ನು ಸಹ ಹೊಂದಿದೆ ಎನ್ನಲಾಗಿದೆ.

ಆಶ್ರಮಕ್ಕಾಗಿ ಭೂಮಿಯನ್ನು 3-4 ವರ್ಷಗಳ ಹಿಂದೆ ತನಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಬಾಬಾ ಹೇಳಿದ್ದಾರೆ. ಆದರೆ ದಾಖಲೆಗಳು ಅವರು ಕೋಟಿಗಟ್ಟಲೆ ಮೌಲ್ಯದ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸುತ್ತವೆ. ದೇಶದ ಇತರ ಸ್ಥಳಗಳಲ್ಲಿನ ಹೆಚ್ಚಿನ ಆಶ್ರಮಗಳು ಈ ಆಸ್ತಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Hathras Stampede: ಹತ್ರಾಸ್‌ ಕಾಲ್ತುಳಿತ- ಭೋಲೆ ಬಾಬಾನ ವಿರುದ್ಧ ಮೊದಲ ಕೇಸ್‌ ದಾಖಲು

Exit mobile version