Site icon Vistara News

ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಖಾತೆಗೆ ಕೋಟಿ ಕೋಟಿ ಹಣ ಜಮಾ; ಮುಂದಾಗಿದ್ದೆಲ್ಲ ಬರೀ ತೊಂದರೆ !

HDFC

ಚೆನ್ನೈ: ಇದ್ದಕ್ಕಿದ್ದಂತೆ ನಿಮ್ಮ ಬ್ಯಾಂಕ್‌ ಖಾತೆಗೆ ಕೋಟಿ ಹಣ ಜಮಾ ಆಗಿ ನೀವು ಕೋಟ್ಯಧಿಪತಿಯಾಗಿಬಿಟ್ಟರೆ ನೀವೇನು ಮಾಡುತ್ತೀರಿ? ಆ ಹಣ ಎಲ್ಲಿಂದ-ಹೇಗೆ ಬಂತು ಎಂದು ತಲೆಕೆಡಿಸಿಕೊಳ್ಳುತ್ತೀರೋ ಅಥವಾ ನಾನು ಕೋಟ್ಯಧಿಪತಿಯಾಗಿಬಿಟ್ಟೆ ಎಂದು ಆನಂದ ಪಡುತ್ತಿರೋ?- ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಲವು ಖಾತೆದಾರರಿ(HDFC Bank customers)ಗೆ ಭಾನುವಾರ ಇಂಥದ್ದೊಂದು ಸನ್ನಿವೇಶ ಎದುರಾಗಿತ್ತು. ಒಂದಷ್ಟು ಗ್ರಾಹಕರ ಖಾತೆಗೆ 2.2 ಕೋಟಿ ರೂ. ಜಮಾ ಆಗಿದ್ದರೆ, ಇನ್ನೊಂದಿಷ್ಟು ಮಂದಿಯ ಅಕೌಂಟ್‌ಗೆ 50 ಲಕ್ಷ ರೂಪಾಯಿ ಬಂದಿತ್ತು. ಅದು ಕೆಲವೇ ಕ್ಷಣಗಳು ಮಾತ್ರ. ಕೂಡಲೇ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ ಕೋರ್ಟ್‌, ಆ ಖಾತೆಗಳನ್ನು ಬ್ಲಾಕ್‌ ಮಾಡಿತ್ತು. ಖಾತೆದಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಅದು ಬರುವುದೂ ಇಲ್ಲ ಬಿಡಿ !

ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಬುರ್ಕಿಟ್‌ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಲವು ಬ್ರ್ಯಾಂಚ್‌ಗಳಲ್ಲಿ ಖಾತೆ ಹೊಂದಿರುವವರಿಗೆ ಈ ಅನುಭವ ಆಗಿದೆ. ಗ್ರಾಹಕರೊಬ್ಬರು ತಮ್ಮ ಕಾರಿಗೆ ಒಂದು ಸಾವಿರ ರೂಪಾಯಿ ಬೆಲೆಯ ಪೆಟ್ರೋಲ್‌ ಹಾಕಿಸಿ, ಹಣ ನೀಡಲೆಂದು ಡೆಬಿಟ್‌ ಕಾರ್ಡ್‌ ಕೊಟ್ಟಿದ್ದಾರೆ. ಅದರಲ್ಲಿ ಟ್ರಾನ್ಸಾಕ್ಷನ್‌ ಮಾಡಿದ ಬಳಿಕ 1 ಸಾವಿರ ರೂ. ಕಡಿತಗೊಂಡ ಮೆಸೇಜ್‌ ಬಂದಿದೆ. ಆದರೆ ಅಕೌಂಟ್‌ನಲ್ಲಿ ಬ್ಯಾಲೆನ್ಸ್‌ ಇರುವ ಹಣ 2.2 ಕೋಟಿ ರೂ. ಎಂದು ತೋರಿಸಿದೆ. ಅದನ್ನು ನೋಡುತ್ತಿದ್ದಂತೆ ಗ್ರಾಹಕ ಕಂಗಾಲಾಗಿ ಕೂಡಲೇ ಬ್ಯಾಂಕ್‌ಗೆ ತಿಳಿಸಿದ್ದಾರೆ. ತಕ್ಷಣವೇ ಅವರ ಖಾತೆ ತಾತ್ಕಾಲಿಕವಾಗಿ ಬ್ಲಾಕ್‌ ಆಗಿದೆ.

ಹಾಗೇ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಇನ್ನೊಬ್ಬ ಉದ್ಯಮಿಯ ಖಾತೆಗೂ 2.2 ಕೋಟಿ ರೂಪಾಯಿ ಜಮಾಗೊಂಡಿತ್ತು. ಇದರಿಂದಾಗಿ ಅಕೌಂಟ್‌ನಲ್ಲಿ ಅವರ ಹಣದ ಮೊತ್ತ 13 ಕೋಟಿ ರೂ.ಗೆ ಏರಿತ್ತು. ʼನನಗೆ ಹಣ ಕ್ರೆಡಿಟ್‌ ಆದ ಬಗ್ಗೆ ಮೊಬೈಲ್‌ಗೆ ಯಾವುದೇ ಮೆಸೇಜ್‌ ಬರಲಿಲ್ಲ. ನಾನು ಆನ್‌ಲೈನ್‌ನಲ್ಲಿ ಯಾವುದೋ ಕಾರಣಕ್ಕೆ ಹಣ ವರ್ಗಾವಣೆ ಮಾಡಿದ್ದೆ. ಆಗ ನನ್ನ ಅಕೌಂಟ್‌ನಿಂದ ದುಡ್ಡು ಡೆಬಿಟ್‌ ಆದ ಮೆಸೇಜ್‌ ಬಂತು. ಅದರಲ್ಲಿ ಬ್ಯಾಲೆನ್ಸ್‌ 13 ಕೋಟಿ ರೂ.ಇರುವುದಾಗಿ ತೋರಿಸಿತು. ನಾನು ಕೂಡಲೇ ಚೆಕ್‌ ಮಾಡಿದೆ. 2.2 ಕೋಟಿ ರೂ. ಹೆಚ್ಚುವರಿ ಜಮಾ ಆಗಿದ್ದು ಆಗ ಗೊತ್ತಾಯಿತು. ಕೆಲವೇ ಕ್ಷಣದಲ್ಲಿ ಅಕೌಂಟ್‌ ಬ್ಲಾಕ್‌ ಆಗಿತ್ತುʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೋಟ್‌ ಬ್ಯಾಂಕ್‌ ಅಲ್ಲ ಎಂಬ ಕಾರಣಕ್ಕೆ ವಿಶ್ವೇಶ್ವರಯ್ಯ ಪ್ರತಿಮೆಗೆ ವಿರೋಧ: ಸರ್‌.ಎಂ.ವಿ. ಮೊಮ್ಮಗ ಬೇಸರ

ಮತ್ತೊಬ್ಬ ಗ್ರಾಹಕರ ಖಾತೆಗೆ 50 ಲಕ್ಷ ರೂ.ಜಮಾ ಆಗಿತ್ತು. ಆದರೆ ಇವರಿಗೆ ತುಂಬ ಸಮಸ್ಯೆ ಉಂಟಾಯಿತು. ʼನನ್ನ ಅಕೌಂಟ್‌ಗೆ 50 ಲಕ್ಷ ರೂ.ಬಂತು. ಬಳಿಕ ನನ್ನ ಅಕೌಂಟ್‌ನ್ನು ಬ್ಯಾಂಕ್‌ನವರು ನಿರ್ಬಂಧಿಸಿದರು. ನನಗೆ ಆಸ್ಪತ್ರೆಯಲ್ಲಿ ಬಿಲ್‌ ಕೊಡಬೇಕಿತ್ತು. ಆದರೆ ಟ್ರಾನ್ಸಾಕ್ಷನ್‌ ಸಾಧ್ಯವಾಗದೆ ತುಂಬ ಕಷ್ಟಪಟ್ಟೆ. ಕಸ್ಟಮರ್‌ ಕೇರ್‌ಗೆ ಕರೆ ಮಾಡಿದರೆ ಅವರು ಸರಿಯಾಗಿ ಉತ್ತರವನ್ನೂ ಕೊಡಲಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ, ಇನ್ನೊಬ್ಬರೂ ಇದೇ ವಿಚಾರ ಹೇಳಿದ್ದಾರೆ. ನನ್ನ ಅಕೌಂಟ್‌ನಲ್ಲಿ ಕೇವಲ 300 ರೂ. ಇತ್ತು. ಆದರೆ ಭಾನುವಾರ ಒಮ್ಮೆಲೇ 1.2 ಕೋಟಿ ರೂಪಾಯಿಗೆ ಏರಿತ್ತು ಎಂದಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರು ಕೋಟ್ಯಧಿಪತಿಗಳಾದ ಕತೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಹಣ ಬರುತ್ತಿದ್ದಂತೆ, ಬ್ಯಾಂಕ್‌ನವರು ಅಕೌಂಟ್‌ ನಿರ್ಬಂಧಿಸಿದ್ದರಿಂದ ತೊಂದರೆಯಾಯಿತು ಎಂದೇ ಅನೇಕರು ಹೇಳುತ್ತಿದ್ದಾರೆ.

ತಾಂತ್ರಿಕ ದೋಷ
ಶನಿವಾರ (ಮೇ 29) ಬ್ಯಾಂಕ್‌ನಲ್ಲಿ ಒಂದಷ್ಟು ಅಪ್‌ಗ್ರೇಡ್‌ ಮಾಡುವ ಕೆಲಸ ಮಾಡಲಾಗಿತ್ತು. ಹೀಗೆ ದೈನಂದಿನ ನಿರ್ವಹಣೆ ಕಾರ್ಯ ಮುಗಿದ ಬಳಿಕ ಈ ಸಮಸ್ಯೆ ತಲೆದೋರಿದೆ. ಬರೀ ನಮ್ಮಲ್ಲಷ್ಟೇ ಅಲ್ಲ, ಭಾರತದಾದ್ಯಂತ ಹಲವು ಕಡೆ ಇದೇ ಸಮಸ್ಯೆ ಆಗಿದೆ. ಶೇ.80 ರಷ್ಟು ಸಮಸ್ಯೆ ಪರಿಹಾರವಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಸಿಬ್ಬಂದಿ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕರ್ಣಾಟಕ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version