ಸಿಡ್ನಿ: ಉದ್ಯಮಿ ಗೌತಮ್ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಹೂಡಿಕೆದಾರ, ಉದ್ಯಮಿ ಜಾರ್ಜ್ ಸೊರೊಸ್ (George Soros Row) ನೀಡಿದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿರುಗೇಟು ನೀಡಿದ್ದಾರೆ. ಸಿಡ್ನಿ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿರುವ ಅವರು, ಕಾನ್ಫರೆನ್ಸ್ ಮಧ್ಯೆಯೇ ಜಾರ್ಜ್ ಸೊರೊಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಾರ್ಜ್ ಸೊರೊಸ್ ಶ್ರೀಮಂತ ಉದ್ಯಮಿಯಾಗಿದ್ದಾರೆ. ಹಾಗೆಯೇ, ಅವರಿಗೆ ವಯಸ್ಸಾಗಿದೆ. ತುಂಬ ಹಠವಾದಿಯೂ ಆಗಿದ್ದಾರೆ. ಆತ ಅಮೆರಿಕದಲ್ಲಿ ಕೂತು ಜಗತ್ತೇ ತಮ್ಮ ಅಭಿಪ್ರಾಯದಂತೆ ಕಾರ್ಯನಿರ್ವಹಿಸಬೇಕು ಎಂಬುದಾಗಿ ಬಯಸುತ್ತಾರೆ. ಅವರಿಗೆ ಇಷ್ಟವಾದವರು ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅವರಿಗೆ ಪ್ರಜಾಪ್ರಭುತ್ವ ಇಷ್ಟವಾಗುತ್ತದೆ. ಇಲ್ಲದಿದ್ದರೆ ಅವರು ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಅವರು ಭಾರತದಲ್ಲಿರುವ ಮುಸ್ಲಿಮರ ಪೌರತ್ವ ರದ್ದುಪಡಿಸಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು” ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ: George Soros: ‘ಭಾರತದ ಪ್ರಜಾಪ್ರಭುತ್ವ ನಾಶಕ್ಕೆ ಯತ್ನ’, ಮೋದಿ ಕುರಿತು ಸೊರೊಸ್ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು
ಜಾರ್ಜ್ ಸೊರೊಸ್ ಹೇಳಿದ್ದೇನು?
“ಗೌತಮ್ ಅದಾನಿಯಂತಹ ಪ್ರಕರಣಗಳು ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ಕಾರಣವಾಗುತ್ತಿವೆ. ಜಾಗತಿಕ ಹೂಡಿಕೆದಾರರು ಹಾಗೂ ಅದಾನಿ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು” ಎಂದು ಜಾರ್ಜ್ ಸೊರೊಸ್ ಆಗ್ರಹಿಸಿದ್ದರು. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವರು ತಿರುಗೇಟು ನೀಡಿದ್ದಾರೆ.