Site icon Vistara News

Article 370 : ಮೋದಿಯ ನಿರ್ಧಾರವನ್ನು ಹೊಗಳಿದ ಕಾಶ್ಮೀರದ ಮೊದಲ ಮುಸ್ಲಿಮ್ ನಾಯಕ ಇವರು

Jammu Kashmir Leader

ನವ ದೆಹಲಿ: 370 ನೇ ವಿಧಿಯನ್ನು (Article 370) ರದ್ದುಪಡಿಸಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಜಮ್ಮು ಕಾಶ್ಮೀರದ ಬುಡ್ಗಾಮ್ ನ ​ ಮೊಹಮ್ಮದ್ ಅಶ್ರಫ್ ಆಜಾದ್ ಅವರು ಶ್ಲಾಘಿಸಿದ್ದಾರೆ. ಯಾಕೆಂದರೆ ಅವರು ಬಿಜೆಪಿ ಬಿಜೆಪಿ ಸೇರಿದ ಕಣಿವೆ ರಾಜ್ಯದ ಮೊದಲ ಮುಸ್ಲಿಂ ನಾಯಕರಾಗಿದ್ದಾರೆ. ಅಂದ ಹಾಗೆ ಅವರ ಮತ್ತು ಪ್ರಧಾನಿ ಮೋದಿಯ ಗೆಳೆತನ ಬಹಳ ಹಳೆಯದು. 1993ರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಮನೆಯಲ್ಲಿ ಆತಿಥ್ಯ ವಹಿಸಿದ್ದರು. ಅವರು ನ್ಯೂಸ್ 18ಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿ ಮತ್ತೊಮ್ಮೆ ಮೋದಿಯ ಕಾರ್ಯವೈಖರಿಯನ್ನು ಹೊಗಳಿದ್ದಾರೆ. “ಮೋದಿ ಅವರು ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

“ಆಗಸ್ಟ್ 5, 2019 ರಂದು ಸರ್ಕಾರ 370 ನೇ ವಿಧಿಯನ್ನು ರದ್ದುಗೊಳಿಸಿದಾಗ, ನಾನು ಸರ್ಕಾರವನ್ನು ಅಭಿನಂದಿಸಿದ್ದೆ. ಈಗ, ನಾನು ಸುಪ್ರೀಂ ಕೋರ್ಟ್ ಅನ್ನು ಅಭಿನಂದಿಸುತ್ತೇನೆ. ಏಕೆಂದರೆ ವಿಧಿಯು ಈ ಪ್ರದೇಶದ ಯುವಕರಿಗೆ ಹಾನಿ ಮಾಡಿದೆ. ಆದರೆ ರಾಜಕಾರಣಿಗಳು ಅದನ್ನು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಮಗೆ ರಾಜ್ಯ ಸ್ಥಾನಮಾನ ಸಿಗುತ್ತದೆ ಮತ್ತು ನಮ್ಮ ಯುವಕರಿಗೆ ಉಜ್ವಲ ಭವಿಷ್ಯವಿದೆ. ಪ್ರಧಾನಿ ಮೋದಿಜಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಈ ನಿರ್ಧಾರಕ್ಕೆ ಕಣಿವೆ ಹೇಗೆ ಪ್ರತಿಕ್ರಿಯಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, “ಆಗಸ್ಟ್ 5, 2019 ರಂದು, ವಿಧಿಯನ್ನು ರದ್ದುಪಡಿಸಿದಾಗ, ಯಾವುದೇ ಹಿಂಸಾಚಾರ ನಡೆದಿಲ್ಲ. ಇಂದು ಕೂಡ ಅದೇ ಪರಿಸ್ಥಿತಿ ಇತ್ತು. ಈ ಹಿಂದೆ ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದ ಜನರು ಇಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಅಷ್ಟೆ ಎಂದು ಹೇಳಿದರು.

ಈ ಪ್ರದೇಶದಲ್ಲಿ ಮುಂಬರುವ ಚುನಾವಣೆಗೆ ಮುಂಚಿತವಾಗಿ, “ನಾನು ಬಿಜೆಪಿ ಟಿಕೆಟ್​​ ಪಡೆದು ಸ್ಪರ್ಧಿಸುತ್ತೇನೆ ಮತ್ತು ಗೆಲ್ಲುತ್ತೇನೆ” ಎಂದು ಆಜಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರಿದ ಬಗ್ಗೆ

1990 ರ ದಶಕದಲ್ಲಿ ಬಿಜೆಪಿಗೆ ಸೇರಿದ ಬಗ್ಗೆ ಆಜಾದ್ ಈ ರೀತಿ ವಿವರಣೆ ನೀಡುತ್ತಾರೆ. 1992ರಲ್ಲಿ ಶ್ರೀನಗರದ ಲಾಲ್ ಚೌಕ್​ನಲ್ಲಿ ತಿರಂಗಾ ಯಾತ್ರೆಗೆ ಬಂದಿದ್ದ ಬಿಜೆಪಿ ನಾಯಕರನ್ನು ನಾನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಅವರ ಮಾತುಗಳನ್ನು ಕೇಳಿದಾಗ, ಕಾಶ್ಮೀರವು ಸ್ವರ್ಗವಾಗಿ ಉಳಿಯಬೇಕಾದರೆ, ನಾನು ಆ ಪಕ್ಷದೊಂದಿಗೆ ಕೈಜೋಡಿಸಬೇಕು ಎಂದು ನಾನು ಅರಿತುಕೊಂಡೆ. ಅವರು ಏನು ಭರವಸೆ ನೀಡುತ್ತಾರೋ ಅದನ್ನು ಪೂರೈಸುತ್ತಾರೆ ಎಂಬುದು ನನಗೆ ಖಾತರಿಯಿತ್ತು.. ನಾನು 1992 ರಲ್ಲಿ ಬಿಜೆಪಿಗೆ ಸೇರಿದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಲಾಗುವುದು ಎಂದು ನನಗೆ ತಿಳಿದಿತ್ತು” ಎಂದು ಅವರು ಆಜಾದ್​ ಹೇಳಿದರು.

ಇಲ್ಲಿಯವರೆಗೆ ಸರ್ಕಾರಗಳನ್ನು ರಚಿಸಿದ ರಾಜಕಾರಣಿಗಳು ಯುವಕರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಕುಟುಂಬಗಳು ಚೆನ್ನಾಗಿವೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಯುವಕರು ಅನವಶ್ಯಕವಾಗಿ ಮೃತಪಟ್ಟಿದ್ದಾರೆ. ಇಲ್ಲಿನ ರಾಜಕಾರಣಿಗಳು ಲಂಡನ್, ಜಮ್ಮು ಮತ್ತು ದೆಹಲಿಯಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇಲ್ಲಿನ ಯುವಕರಿಗೆ ಸರಿಯಾದ ಉದ್ಯೋಗ ಕೂಡ ಇಲ್ಲ. ಇಲ್ಲ್ಲಿನ ರಾಜಕಾರಣಿಗಳು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ಸರ್ಕಾರಗಳಿಂದ ಬಂದ ಅನುದಾನವನ್ನು ಬಳಸಿದ್ದಾರೆ. ಎಲ್ಲವನ್ನೂ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಜಾದ್ ಆರೋಪಿಸಿದ್ದಾರೆ.

Exit mobile version