Site icon Vistara News

Covid-19 News | ಕೋವಿಡ್ ಪೀಡಿತ ಶೇ. 50ರಷ್ಟು ಮಕ್ಕಳಲ್ಲಿ ಸೈಡ್‌ ಎಫೆಕ್ಟ್

covid-19 after effects

ನವ ದೆಹಲಿ: ಕಳೆದೆರಡು ವರ್ಷಗಳಿಂದ ಜಗತ್ತನ್ನು ಬಿಟ್ಟೂಬಿಡದಂತೆ ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕದ (Covid-19) ಪರಿಣಾಮಗಳ ಕುರಿತು ಒಂದರ ಹಿಂದೊಂದರಂತೆ ಈಗ ಅಧ್ಯಯನಗಳು ನಡೆಯುತ್ತಿವೆ. ಕೋವಿಡ್‌ನಿಂದ ಬಳಲಿದ ಮಕ್ಕಳಲ್ಲೂ ಬಹುತೇಕ ಅರ್ಧದಷ್ಟು ಮಂದಿಗೆ ದೀರ್ಘಕಾಲದ ಅಡ್ಡಪರಿಣಾಮ ಕಂಡುಬಂದಿರುವುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ.

ವಯಸ್ಕರಿಗೆ ಹೋಲಿಸಿದಲ್ಲಿ ಕೋವಿಡ್‌ನ ದುಷ್ಪರಿಣಾಮ ಮತ್ತು ಅಡ್ಡಪರಿಣಾಮಗಳು ಮಕ್ಕಳಲ್ಲಿ ಕಡಿಮೆಯೇ ಎಂಬುದು ಈಗಾಗಲೇ ಸಾಧಿತವಾಗಿದೆ. ಆದಾಗ್ಯೂ, ೧೪ ವರ್ಷದೊಳಗಿನ, ಕೋವಿಡ್‌ಗೆ ತುತ್ತಾದ ಮಕ್ಕಳಲ್ಲಿ ಶೇ. ೪೬ರಷ್ಟು ಚಿಣ್ಣರಲ್ಲಿ ದೀರ್ಘ ಕಾಲದವರೆಗೆ ಅಡ್ಡಪರಿಣಾಮಗಳು ಗೋಚರಿಸಿವೆ ಎಂದು “ದಿ ಲ್ಯಾನ್ಸೆಟ್‌ ಚೈಲ್ಡ್‌ ಎಂಡ್‌ ಅಡಲಸೆಂಟ್‌ ಹೆಲ್ತ್‌ʼʼ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ವಿವರಿಸಲಾಗಿದೆ.

ಡೆನ್ಮಾರ್ಕ್‌ನಲ್ಲಿ ನಡೆದ ಈ ಅಧ್ಯಯನದಲ್ಲಿ, ೧೧೯೪ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಮೂರು ವರ್ಷದೊಳಗಿನ ಶೇ. ೪೦ರಷ್ಟು ಮಕ್ಕಳಲ್ಲಿ ಅಡ್ಡಪರಿಣಾಮಗಳು ಗೋಚರಿಸಿದರೆ, ೪-೯ವರ್ಷದೊಳಗಿನ ಮಕ್ಕಳಲ್ಲಿ ಇದು ಶೇ. ೩೮ರಷ್ಟು ಮತ್ತು ೧೨-೧೪ರ ವಯೋಮಾನದ ಮಕ್ಕಳಲ್ಲಿ ಶೇ. ೪೬ರಷ್ಟು ಕಂಡುಬಂದಿದೆ. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಪುಟ್ಟ ಮಕ್ಕಳಿಗಿಂತಲೂ ಹದಿಹರೆಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

“ನಮ್ಮ ಒಟ್ಟಾರೆ ಉದ್ದೇಶವಿದ್ದಿದ್ದು ಕೋವಿಡ್‌ನ ದೀರ್ಘಕಾಲೀನ ಪರಿಣಾಮ ಮಕ್ಕಳ ಮೇಲೆ ಏನಿದೆ ಮತ್ತು ಹೇಗಿದೆ ಎಂಬುದನ್ನು ಅರಿಯಬೇಕೆಂಬುದು. ಬದುಕಿನ ಗುಣಮಟ್ಟದ ಮೇಲಿನ ಪರಿಣಾಮವೇನು, ಶಾಲೆಯಿಂದ ಎಷ್ಟು ದಿನ ಹೊರಗುಳಿಯಬೇಕಾಯಿತು ಎಂಬಂಥ ಕೋವಿಡ್‌ನ ಇನ್ನಿತರ ಪರಿಣಾಮಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಲು ಇನ್ನೂ ದೀರ್ಘವಾದ ಅಧ್ಯಯನ ನಡೆಯಬೇಕಿದೆʼ ಎಂದು‌ ಕೊಪೆನ್‌ಹೆಗನ್‌ ವಿಶ್ವವಿದ್ಯಾಲಯದ ಆಸ್ಪತ್ರೆಯ ಪ್ರಾಧ್ಯಾಪಕ ಸೆಲೀನಾ ಬೆರ್ಗ್ ತಿಳಿಸಿದ್ದಾರೆ.

ಈ ಅಧ್ಯಯನದಲ್ಲಿ, ಸೋಂಕಿನ ನಂತರ ಕಾಣಿಸಿಕೊಳ್ಳುವ ಸುಮಾರು ೨೩ ಸಾಮಾನ್ಯ ಲಕ್ಷಣಗಳ ಬಗ್ಗೆ ಚೇತರಿಸಿಕೊಂಡ ರೋಗಿಗಳನ್ನು ಕೇಳಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ, ಎರಡು ತಿಂಗಳಿಗೂ ಅಧಿಕ ಕಾಲ ಕೋವಿಡ್‌ ಸಂಬಂಧಿ ಸಮಸ್ಯೆಗಳಿದ್ದರೆ ಮಾತ್ರವೇ ಅದನ್ನು ದೀರ್ಘ ಕೋವಿಡ್‌ ಎನ್ನಲಾಗುತ್ತದೆ. ಈ ಮಕ್ಕಳ ಪೈಕಿ ಹೆಚ್ಚಿನವರಲ್ಲಿ ಸುಸ್ತು-ಆಯಾಸ, ಹೊಟ್ಟೆ ನೋವು, ಚರ್ಮದ ತೊಂದರೆ, ಮಾನಸಿಕ ಏರುಪೇರು, ನೆನಪು ಅಥವಾ ಏಕಾಗ್ರತೆಯ ಸಮಸ್ಯೆಗಳು ದೀರ್ಘ ಕಾಲದವರೆಗೆ ಇದ್ದವು.

“ಒಟ್ಟಾರೆಯಾಗಿ ಗಮನಿಸಿದರೆ, ಸಾಂಕ್ರಾಮಿಕದ ಪರೋಕ್ಷ ದುಷ್ಪರಿಣಾಮಗಳಿಗೆ ಹೋಲಿಸಿದರೆ ಕೋವಿಡ್‌ನ ನೇರ ದುಷ್ಪರಿಣಾಮಗಳು ಮಕ್ಕಳ ಮೇಲೆ ಕಡಿಮೆಯೇ ಇವೆ. ಆದರೂ ಕೆಲವು ಮಕ್ಕಳು ಗುಣಮುಳರಾಗಲು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಇಂಥ ಆರೋಗ್ಯದ ಅಡ್ಡ ಪರಿಣಾಮಗಳು ಕಾಲಕ್ರಮೇಣ ಮಕ್ಕಳಲ್ಲಿ ಮಾಯವಾಗಬಹುದುʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಕೋವಿಡ್‌, ಅದರಲ್ಲೂ ಓಮಿಕ್ರಾನ್‌ ಅಲೆ, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಂತಹ ಮಕ್ಕಳಲ್ಲಿ ಹೆಚ್ಚಿನವರಲ್ಲಿ ಅಸ್ವಸ್ಥತೆಯ ಜೊತೆಗೆ ಉಸಿರಾಟ ಸಂಬಂಧಿ ಸಮಸ್ಯೆಗಳೂ ಇದ್ದವುʼʼ ಎಂದು ದೆಹಲಿಯ ಮಕ್ಕಳ ತಜ್ಞ ಡಾ. ಜೆ.ಎಸ್.‌ ಭಾಸಿನ್‌ ಹೇಳಿದ್ದಾರೆ.

ಇದನ್ನೂ ಓದಿ | ಕೋವಿಡ್‌ ಲಸಿಕೆಯಿಂದ ಯುವಜನರಲ್ಲಿ ಹೃದಯ ರೋಗ ಹೆಚ್ಚಾಗಿದ್ದು ನಿಜವೇ?

Exit mobile version