ನವ ದೆಹಲಿ: ಕೊವಿಡ್ 19 ಸೋಂಕಿನ ಅಬ್ಬರ ಮತ್ತೆ ಶುರುವಾಗುವ ಲಕ್ಷಣ ಗೋಚರಿಸುತ್ತಿದೆ. ಚೀನಾದಲ್ಲಂತೂ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದೆ. ಅಷ್ಟೇ ಅಲ್ಲ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಯುಎಸ್ಗಳಲ್ಲೂ ಸೋಂಕಿನ ಹಬ್ಬುವಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದಲ್ಲೂ ಎಚ್ಚರ ವಹಿಸಲು ಮುಂದಾಗಲಾಗುತ್ತಿದೆ. ಇಂದು ಬೆಳಗ್ಗೆ 11ಗಂಟೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿ, ಭಾರತದಲ್ಲಿ ಸದ್ಯ ಇರುವ ಕೊವಿಡ್ 19 ಪರಿಸ್ಥಿತಿಯ ವರದಿ ಪಡೆಯಲಿದ್ದಾರೆ.
ಭಾರತದಲ್ಲೂ ಕೊವಿಡ್ 19 ಜಾಸ್ತಿ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಜಿನೋಮ್ ಸಿಕ್ವೆನ್ಸಿಂಗ್ ಅನುಕ್ರಮ ಹೆಚ್ಚಿಸಬೇಕು. ಪಾಸಿಟಿವ್ ಕೇಸ್ಗಳನ್ನು ಟ್ರ್ಯಾಕ್ ಮಾಡಿ, ರೂಪಾಂತರಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಡಿ.20ರಂದು ಕೇಂದ್ರಾಡಳಿತ ಪ್ರದೇಶಗಳಿಗೆ, ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಶನ್ ಮತ್ತು ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆ ಎಂಬ ಐದು ಹಂತದ ಕಾರ್ಯಕತಂತ್ರಗಳನ್ನು ಪ್ರಬಲವಾಗಿ-ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಕೊರೊನಾವನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಸದ್ಯ ವಾರಕ್ಕೆ 1200 ಕೊರೊನಾ ಪ್ರಕರಣಗಳಷ್ಟೇ ವರದಿಯಾಗುತ್ತಿದೆ. ಆದರೂ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲು ಎದುರಾಗಿದ್ದು, ನಾವೂ ಎಚ್ಚರಿಕೆಯಿಂದ ಇರಬೇಕು ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಡೆಸಲಿರುವ ಸಭೆಯಲ್ಲಿ ಆರೋಗ್ಯ ಇಲಾಖೆ, ಫಾರ್ಮಾಸ್ಯುಟಿಕಲ್ಸ್ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಆಯುಷ್ ಇಲಾಖೆಗಳ ಕಾರ್ಯದರ್ಶಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಧಾನ ನಿರ್ದೇಶಕ ರಾಜೀವ್ ಬಹ್ಲ್, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್ ಮತ್ತು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (NTAGI) ಅಧ್ಯಕ್ಷ ಎನ್.ಎಲ್.ಅರೋರಾ ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು.
ಚೀನಾದಲ್ಲಿ ಈಗಾಗಲೇ ಕೊರೊನಾ ವೈರಸ್ ವಿಪರೀತ ಆಗಿದೆ. ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗಿದೆ. ಹಾಗೇ ಶವ ಇಡಲೂ ಜಾಗವಿಲ್ಲ. ಶವಾಗಾರಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಶವಗಳ ಸಂಸ್ಕಾರ ಮಾಡಲಾಗುತ್ತಿದೆ. ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ ಶೇ.60ರಷ್ಟು ಜನರಿಗೆ ಕೊವಿಡ್ 19 ತಗುಲುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಲಿಯಾಂಗ್ ಫೀಗಲ್-ಡಿಂಗ್ ಹೇಳಿದ್ದಾರೆ. ಹಾಗೇ, ವಿಶ್ವದ ಶೇ.10ರಷ್ಟು ಜನರಿಗೆ ಕೊರೊನಾ ಹರಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗೆ ವಿಶ್ವದ ಹಲವು ರಾಷ್ಟ್ರಗಳು ಮತ್ತೆ ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಲ್ಲೇ ಭಾರತದಲ್ಲೂ ಕಾರ್ಯಪ್ರವೃತ್ತವಾಗಲಿದೆ.
ಇದನ್ನೂ ಓದಿ: Viral Video | ಚೀನಾದಲ್ಲಿ ಮತ್ತೆ ಮಿತಿಮೀರಿದ ಕೊರೊನಾ; ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಶವಸಂಸ್ಕಾರ ಅವಿರತ