Site icon Vistara News

Heart Attack | ಹೃದಯಾಘಾತವಾಗಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಐಎಎಸ್‌ ಅಧಿಕಾರಿ! ವಿಡಿಯೊ ವೈರಲ್

ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗಿವೆ. ಹೃದಯಾಘಾತವಾದ ವ್ಯಕ್ತಿಗೆ ತಕ್ಷಣಕ್ಕೆ ಸಿಪಿಆರ್‌ (Cardiopulmonary resuscitation) ಮಾಡಿದರೆ ಅವರು ಉಳಿಯುವ ಸಾಧ್ಯತೆಗಳಿರುತ್ತದೆ. ಚಂಡೀಗಢದಲ್ಲಿ ಹೃದಯಾಘಾತವಾದ ವ್ಯಕ್ತಿಯೊಬ್ಬರನ್ನು ಐಎಎಸ್‌ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಯೇ ಸಿಪಿಆರ್‌ ಮಾಡಿ ಬದುಕಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದನ್ನೂ ಓದಿ: Karwar News | ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಕಡವೆ ಹೃದಯಾಘಾತದಿಂದ ಸಾವು

ಹೃದಯಾಘಾತವಾಗಿರುವ ವ್ಯಕ್ತಿ ಕುರ್ಚಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಳಿತಿದ್ದಾರೆ. ಚಂಡೀಗಢದ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿರುವ ಯಶ್ಪಾಲ್‌ ಗರ್ಗ್‌ ಅವರು ಆ ವ್ಯಕ್ತಿಗೆ ಸಿಪಿಆರ್‌ ಮಾಡುತ್ತಿದ್ದಾರೆ. ಸುಮಾರು ಒಂದು ನಿಮಿಷದ ಕಾಲ ಸಿಪಿಆರ್‌ ಮಾಡಿದ ನಂತರ ಆ ವ್ಯಕ್ತಿ ಪ್ರಜ್ಞೆ ವಾಪಸು ಬಂದಿದೆ. ಈ ದೃಶ್ಯವುಳ್ಳ ವಿಡಿಯೊವನ್ನು ಮಹಿಳಾ ಆಯೋಗದ ಮುಖ್ಯಸ್ಥರಾಗಿರುವ ಸ್ವಾತಿ ಮಲಿವಾಲ್ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


“ಯಶ್ಪಾಲ್‌ ಅವರು ಒಂದು ಜೀವವನ್ನು ಉಳಿಸಿದ್ದಾರೆ. ಇವರ ರೀತಿಯಲ್ಲಿ ಸಿಪಿಆರ್‌ ಮಾಡುವುದಕ್ಕೆ ಕಲಿತರೆ ಎಷ್ಟೋ ಪ್ರಾಣಗಳನ್ನು ಉಳಿಸಬಹುದು. ಎಲ್ಲರೂ ಸಿಪಿಆರ್‌ ಕಲಿಯುವುದು ಒಳ್ಳೆಯದು” ಎಂದು ಅವರು ಕ್ಯಾಪ್ಶನ್‌ನಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಧಿಕಾರಿಯ ಸಮಯಪ್ರಜ್ಞೆಯ ಬಗ್ಗೆ ಕೊಂಡಾಡುತ್ತಿದ್ದಾರೆ. ಹಾಗೆಯೇ ಅವರಿಗೆ ಅಭಿನಂದನೆಗಳನ್ನು ತಿಳಿಸಲಾರಂಭಿಸಿದ್ದಾರೆ.

Exit mobile version