Site icon Vistara News

Kochi Stampede: ಹೃದಯ ಛಿದ್ರಗೊಂಡಿದೆ; ಕೊಚ್ಚಿ ಕಾಲ್ತುಳಿತಕ್ಕೆ ಗಾಯಕಿ ನಿಖಿತಾ ಗಾಂಧಿ ಕಂಬನಿ

Nikhita Gandhi On Kochi Stampede

Heartbroken, Devastated: Bollywood Singer Nikhita Gandhi After 4 Die Ahead Of Concert

ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಶ್ಶೇರಿಯಲ್ಲಿರುವ ಕೊಚ್ಚಿ ಯುನಿವರ್ಸಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯಲ್ಲಿ (Cochin University of Science and Technology- CUSAT) ಕಾಲ್ತುಳಿತ ಸಂಭವಿಸಿ (Kochi Stampede) ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 65 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ ಗಾಯಕಿ ನಿಖಿತಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಹೃದಯವೇ ಒಡೆದು ಹೋಗಿದೆ” ಎಂದು ಗಾಯಕಿ ವಿಷಾದಿಸಿದ್ದಾರೆ.

ವಿಶ್ವವಿದ್ಯಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕ್ಯಾಂಪಸ್‌ನ ಓಪನ್‌ ಏರ್‌ ಆಡಿಟೋರಿಯಂನಲ್ಲಿ ನಿಖಿತಾ ಗಾಂಧಿ ಅವರ ಸಂಗೀತೋತ್ಸವ ಇತ್ತು. ಅದಕ್ಕಾಗಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದರು. ಇದೇ ವೇಳೆ ಮಳೆ ಬಂದ ಕಾರಣ ಎಲ್ಲರೂ ಓಡಿ ಹೋಗಿದ್ದು, ಕಾಲ್ತುಳಿತ ಸಂಭವಿಸಿದೆ. ಹಾಗಾಗಿ ನಿಖಿತಾ ಗಾಂಧಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಕೊಚ್ಚಿ ವಿವಿಯಲ್ಲಿ ನಡೆದ ಘಟನೆಯಿಂದ ಹೃದಯವೇ ಛಿದ್ರವಾಗಿದೆ. ನಾನು ಸಂಗೀತೋತ್ಸವ ನಡೆಸಬೇಕಾದ ಸ್ಥಳಕ್ಕೆ ಹೊರಡಲು ಅಣಿಯಾಗುವ ಮುನ್ನವೇ ಇಂತಹ ದುರಂತ ನಡೆದಿರುವುದು ನಿಜಕ್ಕೂ ದುರದೃಷ್ಟಕರ. ಘಟನೆಯಲ್ಲಿ ನಿಧನ ಹೊಂದಿದವರ ಕುರಿತು ಏನೂ ಮಾತನಾಡಲು ಆಗುತ್ತಿಲ್ಲ. ವಿದ್ಯಾರ್ಥಿಗಳ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ನಿಖಿತಾ ಗಾಂಧಿ ಅವರು ಇನ್‌ಸ್ಟಾಗ್ರಾಂ ಸ್ಟೋರಿ ಅಪ್‌ಡೇಟ್‌ ಮಾಡಿದ್ದಾರೆ.

ಮೃತ ವಿದ್ಯಾರ್ಥಿಗಳಿಗೆ ಗೌರವ ನಮನ

ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಕೊಚ್ಚಿ ವಿಶ್ವವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ನಡೆದ ಕಾಲ್ತುಳಿತ ನಡೆದ ಪ್ರಕರಣವನ್ನು ರಾಜ್ಯ ಸರ್ಕಾರವು ತನಿಖೆಗೆ ವಹಿಸಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ, ವಿವಿ ಕುಲಪತಿ ಹಾಗೂ ರಿಜಿಸ್ಟ್ರಾರ್‌ ಇರುವ ಮೂವರು ಸದಸ್ಯರ ತಂಡವನ್ನು ಉನ್ನತ ಶಿಕ್ಷಣ ಸಚಿವೆ ಆರ್.‌ ಬಿಂದು ರಚಿಸಿದ್ದಾರೆ. ಕ್ಷಿಪ್ರವಾಗಿ ತನಿಖೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಮಿತಿಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Kochi Stampede: ಕೊಚ್ಚಿ ವಿವಿಯಲ್ಲಿ ಕಾಲ್ತುಳಿತ ಆಗಿದ್ದು ಹೇಗೆ? ಮಳೆರಾಯ ಆದನೇ ಜವರಾಯ?

ಒಂದೇ ಗೇಟ್‌ನಲ್ಲಿ ಎಕ್ಸಿಟ್‌, ಎಂಟರ್‌ ಕೂಡ ಕಾರಣ

ಓಪನ್‌ ಏರ್‌ ಆಡಿಟೋರಿಯಂಗೆ ಎಕ್ಸಿಟ್‌ ಹಾಗೂ ಎಂಟರ್‌ (ಪ್ರವೇಶ ಮತ್ತು ನಿರ್ಗಮನ) ಗೇಟ್‌ಗಳಿವೆ. ಆದರೆ, ಮಳೆ ಬಂದ ಕಾರಣ ವಿದ್ಯಾರ್ಥಿಗಳೆಲ್ಲರೂ ಒಂದೇ ಗೇಟ್‌ನತ್ತ ತೆರಳಿದ್ದಾರೆ. ಪ್ರವೇಶ ದ್ವಾರದಿಂದ ನೂರಾರು ವಿದ್ಯಾರ್ಥಿಗಳು ಆಡಿಟೋರಿಯಂ ಒಳಗೆ ಬರುತ್ತಿದ್ದರು. ಆದರೆ, ಸಾವಿರಾರು ವಿದ್ಯಾರ್ಥಿಗಳು ಎಂಟರ್‌ ಗೇಟ್‌ನತ್ತಲೇ ತೆರಳಿದಾಗ ಎಂಟರ್‌ ಆಗುತ್ತಿದ್ದ ವಿದ್ಯಾರ್ಥಿಗಳು ಬಿದ್ದಿದ್ದಾರೆ. ಸಾವಿರಾರು ಜನ ಅವರನ್ನು ತುಳಿದುಕೊಂಡೇ ಎಕ್ಸಿಟ್‌ ಆದ ಕಾರಣ ಗಾಯಾಳುಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Exit mobile version