Site icon Vistara News

Heat Wave: ಬಿಹಾರದಲ್ಲಿ ಬಿಸಿಲಾಘಾತ; ಶಾಖಕ್ಕೆ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಮಂದಿ ಬಲಿ

Heat Wave

Heat Wave

ಪಟನಾ: ದೇಶದಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಜತೆಗೆ ಉತ್ತರ ಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ (Heat Wave) ಬೀಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲಿಯೂ ಬಿಹಾರ(Bihar)ದಲ್ಲಿ ಬಿಸಿಗಾಳಿಯ ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ ಸುಮಾರು 14 ಮಂದಿ ಬಿಸಿಲಿನ ಶಾಖಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಹೆಚ್ಚಿನ ಸಾವು ನೋವು ಭೋಜ್‌ಪುರದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 5 ಮಂದಿ ಮೃತಪಟ್ಟಿದ್ದಾರೆ. ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು, ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜತೆಗೆ ರಾಜ್ಯದ ವಿವಿಧ ಭಾಗಳಲ್ಲಿಯೂ ಅನೇಕರು ಬಿಸಿಲಿನ ಝಳಕ್ಕೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದ ಹಲವೆಡೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಗುರುವಾರ ಬಕ್ಸಾರ್‌ನಲ್ಲಿ ಅತೀ ಹೆಚ್ಚು 47.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿಸಿ ಗಾಳಿ ವ್ಯಾಪಕವಾಗಿ ಬೀಸುತ್ತಿರುವ ಪರಿಣಾಮ ಎಲ್ಲ ಶಾಲೆಗಳು, ಕೋಚಿಂಗ್‌ ಸೆಂಟರ್‌ಗಳು ಮತ್ತು ಅಂಗನವಾಡಿಗಳಿಗೆ ಜೂನ್‌ 8ರ ತನಕ ರಜೆ ಸಾರಲಾಗಿದೆ.

ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಶಾಲೆಗಳಿಗೆ ಶಿಕ್ಷಕರು ಬರಬೇಕು ಎನ್ನುವ ಸರ್ಕಾರದ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ “ಪ್ರತಿಪಕ್ಷಗಳ ಒತ್ತಡದಿಂದಾಗಿ ಸರ್ಕಾರಿ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ತೀವ್ರ ಶಾಖದ ಅಲೆ ಎಲ್ಲೆಡೆ ವ್ಯಾಪಿಸಿರುವಾಗ ಶಿಕ್ಷಕರನ್ನು ಶಾಲೆಗಳಿಗೆ ಬರಲು ಏಕೆ ಹೇಳಲಾಗುತ್ತಿದೆ? ವಿದ್ಯಾರ್ಥಿಗಳು ಸ್ವತಃ ಶಾಲೆಯಲ್ಲಿ ಇಲ್ಲದಿದ್ದಾಗ ಶಿಕ್ಷಕರು ಏನು ಮಾಡುತ್ತಾರೆ? ಈ ಸುಡುವ ಬಿಸಿಲಿನಲ್ಲಿ ಶಿಕ್ಷಕರಿಗೂ ರಜೆ ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಉಷ್ಣಾಂಶದ ಹೆಚ್ಚಳ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ಎರಡು ದಿನಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರಿದೆ. ಗುರುವಾರ ಇದು 56 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಉತ್ತರ ಅಂಬಾಜಾರಿ ರಸ್ತೆಯ ರಾಮದಾಸ್​ಪೇಟ್​​ನ ಪಿಡಿಕೆವಿಯಲ್ಲಿರುವ 24 ಹೆಕ್ಟೇರ್ ತೆರೆದ ಕೃಷಿ ಕ್ಷೇತ್ರದಲ್ಲಿರುವ ಹವಾಮಾನ ಕೇಂದ್ರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೋನೆಗಾಂವ್​ನ ಪ್ರಾದೇಶಿಕ ಹವಾಮಾನ ಕೇಂದ್ರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ವಾರ್ಧಾ ರಸ್ತೆಯ ಖಾಪ್ರಿಯಲ್ಲಿರುವ ಸೆಂಟ್ರಲ್ ಇನ್ಸ್​ಟಿಟ್ಯೂಟ್​ ಆಫ್ ಕಾಟನ್ ರಿಸರ್ಚ್ ಪ್ರದೇಶದ ಹೊಲಗಳಲ್ಲಿನ ಅಂಗನವಾಡಿ ಕೇಂದ್ರವು 44 ಡಿಗ್ರಿ ಸೆಲ್ಸಿಯಸ್ ಮತ್ತು ರಾಮ್ಟೆಕ್ ಎಡಬ್ಲ್ಯೂಎಸ್ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.

Exit mobile version