Site icon Vistara News

Heat Wave: ಬಿಸಿ ಗಾಳಿ ಶಾಖಕ್ಕೆ ತತ್ತರಿಸಿದ ಬಿಹಾರ; ಎರಡೇ ಗಂಟೆಗಳಲ್ಲಿ 16 ಮಂದಿ ಸಾವು

Heat Wave

ಪಾಟ್ನಾ: ಬಿಹಾರ(Bihar)ದಲ್ಲಿ ಬಿಸಿ ಗಾಳಿ(Heat Wave) ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಇದರ ಪರಿಣಾಮವಾಗಿ ಕೇವಲ ಎರಡೇ ಗಂಟೆಗಳಲ್ಲಿ ಬಿಸಿಗಾಳಿ ಶಾಖಕ್ಕೆ ಬರೋಬ್ಬರಿ 16 ಜನ ಬಲಿಯಾಗಿದ್ದಾರೆ. ಔರಂಗಾಬಾದ್‌ ಜಿಲ್ಲಾಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಗರದ ಉಷ್ಣಾಂಶ 48.2 ಡಿಗ್ರಿಗೆ ಏರಿಕೆ ಆಗಿದೆ. ಇದು ಬಿಹಾರದಲ್ಲೇ ಅತಿ ಹೆಚ್ಚ ಉಷ್ಣಾಂಶ ಹೊಂದಿರುವ ನಗರವಾಗಿದೆ.

ಈ ಕುರಿತು ಔರಂಗಾಬಾದ್‌ ಜಿಲ್ಲಾಸ್ಪತ್ರೆ ವೈದ್ಯರು ಪ್ರತಿಕ್ರಿಯಿಸಿದ್ದು, ತೀವ್ರ ಬಿಸಿ ಗಾಳಿಗೆ ತುತ್ತಾಗಿ ಅಸ್ವಸ್ಥಗೊಂಡಿರುವ 35 ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದುರಾದೃಷ್ಟವಶಾತ್‌ 16ಕ್ಕೂ ಅಧಿಕ ಜನ ಬಿಸಿಗಾಳಿ ಶಾಖಕ್ಕೆ ಬಲಿಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ನಮ್ಮ ಸಾಕಷ್ಟು ತಜ್ಞ ವೈದ್ಯರಿದ್ದಾರೆ. ಔಷಧ, ಐಸ್‌ ಪ್ಯಾಕ್‌ ಮತ್ತು ಅನೇಕ ಕೂಲರ್‌ಗಳ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಗಾಳಿ ಸಮಸ್ಯೆಯಿಂದಾಗಿ ಮುಂಜಾಗೃತಾ ಕ್ರಮವಾಗಿ ಬಿಹಾರ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳನ್ನು ಜೂ.8ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಕೆಲವು ದಿನಗಳಿಂದ ಶಾಲೆಗಳಲ್ಲಿ ಬಿಸಿ ಗಾಳಿ ಶಾಖಕ್ಕೆ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆ ವರದಿ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಕ್ಕಳು ಪ್ರಜ್ಞೆ ತಪ್ಪಿರುವ ವೀಡಿಯೊಗಳು ವೈರಲ್ ಆಗಿದ್ದು, ಶಾಲೆಯ ವಿದ್ಯಾರ್ಥಿಗಳು ತುಂಬಾ ದಣಿದಿದ್ದಾರೆ ಎಂದು ಕಂಡುಬಂದಿದೆ. ಶಿಕ್ಷಕರು ಅವರಿಗೆ ನೀರು ಒದಗಿಸುವ ಮೂಲಕ ಮತ್ತು ಅವರಿಗೆ ಗಾಳಿ ಬೀಸುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರಿಗೆ ಸಲೈನ್ ಚುಚ್ಚುಮದ್ದು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರೂ ಬಿಸಿಗಾಳಿಯ ತಾಪಮಾನಕ್ಕೆ ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆಯೂ ವರದಿ ಆಗಿದೆ.

ಇದನ್ನೂ ಓದಿ:Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

Exit mobile version