Site icon Vistara News

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Heat wave

ಭುವನೇಶ್ವರ: ಉತ್ತರಭಾರತದ ವಿವಿಧ ರಾಜ್ಯಗಳಲ್ಲಿ ಬಿಸಿಗಾಳಿ(Heat Wave) ಸಮಸ್ಯೆ ಮುಂದುವರೆದಿದ್ದು, ಸುಮಾರು 200ಕ್ಕೂ ಅಧಿಕ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಡಿಶಾ(Odisha)ದಲ್ಲಿ ಕಳೆದ ಕೆಲವು ದಿನಗಳಲ್ಲಿ ವಾತಾವರಣದ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ. ಒಡಿಶಾದಲ್ಲಿ ಕಳೆದ 24 ಗಂಟೆಗಳಲ್ಲಿ 45 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಬಿಸಿಗಾಳಿ ತಾಪಮಾನಕ್ಕೆ ಒಟ್ಟು 211 ಜನ ಬಲಿಯಾಗಿದ್ದು, 141 ಸಾವು ಒಡಿಶಾದಲ್ಲೇ ಆಗಿದೆ. ಕಳೆದ 24ಗಂಟೆಗಳಲ್ಲಿ 45 ಜನ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನುಳಿದ 107 ಸಾವು ಬಿಸಿಗಾಳಿಯಿಂದಾಗಿಯೇ ಆಗಿರುವುದೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಡಿಶಾದ ಸುಂದರ್‌ ಘರ್‌ ಜಿಲ್ಲೆ ಬಿಸಿಗಾಳಿ ಸಮಸ್ಯೆಗೆ ಅತಿ ಹೆಚ್ಚಾಗಿ ತುತ್ತಾಗಿರುವ ಜಿಲ್ಲೆಯಾಗಿದ್ದು, ಇಲ್ಲಿ ಕಳೆದ ಮೂರು ದಿನಗಳಲ್ಲಿ 35 ಜನ ಸಾವನ್ನಪ್ಪಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಈ ಬಗ್ಗೆ ಮಾಹಿತಿ ನೀಡಿದ್ದು, ಜೂನ್ 3 ರಂದು ದೇಶದ ಹಲವು ಪ್ರದೇಶಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಮುಂದುವರಿಯುತ್ತದೆ ಎಂದು ಹೇಳಿದ್ದು, ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ಕೆಲವು ಕಡೆ, ರಾಜಸ್ಥಾನ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಜೂನ್ 3 ರಂದು ಬಿಸಿಗಾಳಿ ಶಾಖದ ಪ್ರಮಾಣ ಅತಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೇಶದ ಬಿಸಿಗಾಳಿ ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಸಭೆ ನಡೆಸಿದ್ದಾರೆ. ಸಭೆಯಲ್ಲಿ, IMD ಮುನ್ಸೂಚನೆಗಳ ಪ್ರಕಾರ, ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶಾಖದ ಅಲೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಧಾನಿಗೆ ವಿವರಿಸಲಾಯಿತು.

Exit mobile version