Site icon Vistara News

Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

Heat Wave

ನವದೆಹಲಿ: ಉತ್ತರಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ(Heat Wave) ಸಮಸ್ಯೆ ಮುಂದುವರೆದಿದ್ದು, ಸುಮಾರು 54 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ, ಪಂಜಾಬ್‌ ಮತ್ತು ಒಡಿಶಾದಲ್ಲಿ ಕಳೆದ ಕೆಲವು ದಿನಗಳಲ್ಲಿ ವಾತಾವರಣದ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ. ಒಡಿಶಾದಲ್ಲಿ ಕಳೆದ 24 ಗಂಟೆಗಳಲ್ಲಿ 12 ಜನ ಬಲಿಯಾಗಿದ್ದರೆ, ರಾಜಸ್ಥಾನದಲ್ಲಿ ತುರ್ತುಪರಿಸ್ಥಿತಿ(Emergency) ಘೋಷಿಸಲು ಕೇಂದ್ರ ಸರ್ಕಾರ(Central Government)ಕ್ಕೆ ಹೈಕೋರ್ಟ್‌ ಆಗ್ರಹಿಸಿದೆ.

ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ 47.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಮಹಿಳೆ ಸೇರಿದಂತೆ ನಾಲ್ಕು ಜನರು ಬಿಸಿಗಾಳಿ ಬಲಿಯಾಗಿದ್ದಾರೆ. ಇದರ ನಡುವೆ ನೀರಿನ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆ ದಿಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ನೆರೆ ರಾಜ್ಯ ಹರ್ಯಾಣದಿಂದ ಒಂದು ತಿಂಗಳ ಮಟ್ಟಿ ಹೆಚ್ಚುವರಿ ನೀರು ಬಿಡಲು ಆದೇಶಿಸುವಂತೆ ಆಗ್ರಹಿಸಿದೆ

ತುರ್ತು ಪರಿಸ್ಥಿತಿ ಘೋಷಣೆಗೆ ಒತ್ತಾಯ

ಬಿಸಿ ಗಾಳಿ ಶಾಖಕ್ಕೆ ಬಸವಳಿದು ಬೆಂಡಾಗಿರುವ ರಾಜಸ್ಥಾನದಲ್ಲಿ ಜನರ ಸ್ಥಿತಿ ಅಯೋಮಯವಾಗಿದೆ. ಇದೇ ಕಾರಣದಿಂದಾಗಿ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್‌ ಒತ್ತಾಯಿಸಿದೆ. ಜನರನ್ನು ಬಿಸಿಲ ಬೇಗೆಯಿಂದ ಕಾಪಾಡಲು ಸರ್ಕಾರ ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮಲ್ಲಿ ಪ್ಲ್ಯಾನ್‌ ಬಿ ಕೂಡ ಇಲ್ಲ. ಈಗಲೇ ಸೂಕ್ತ ಕ್ರಮ ಜರುಗಿಸದೇ ಇದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಭೀಕರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ. ಅಲ್ಲದೇ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಹವಾಮಾನ ಇಲಾಖೆ ಹೇಳೋದೇನು?

ಭಾರತೀಯ ಹವಾಮಾನ ಇಲಾಖೆ(IMD) ಉತ್ತರ ಭಾರತದಲ್ಲಿ ಉಷ್ಣಾಂಶ ಏರಿಕೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ 24 ಗಂಟೆಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ನಾಳೆಯಿಂದ ಈ ಇಡೀ ಪ್ರದೇಶದಿಂದ ಕ್ರಮೇಣ ಶಾಖದ ಅಲೆಗಳು ಕಡಿಮೆಯಾಗುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರ ಆಧಾರದ ಮೇಲೆ, ಈ ಎಲ್ಲಾ ರಾಜ್ಯಗಳಲ್ಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಬಿಹಾರ ಮತ್ತು ಜಾರ್ಖಂಡ್ ಈ ಎಲ್ಲಾ ರಾಜ್ಯಗಳಲ್ಲಿ ನಾವು ಇಂದು ಉಷ್ಣ ಅಲೆಗಳ ಬಗ್ಗೆ ಆರೆಂಜ್ ಅಲರ್ಟ್ ನೀಡಿದ್ದೇವೆ ಎಂದು ಐಎಂಡಿ ವಿಜ್ಞಾನಿ ಸೋಮಾ ಸೇನ್‌ ಹೇಳಿದ್ದಾರೆ.

Exit mobile version