ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಉತ್ತರಭಾರತದ ರಾಜ್ಯಗಳಲ್ಲಿ ಉಷ್ಣಮಾರುತವು (Heat wave) ಮಾರಣಾಂತಿಕವಾಗಿ ಪರಿಣಮಿಸಿದ್ದು, ಇದುವರೆಗೆ ದೇಶಾದ್ಯಂತ 143 ಜನ ಬಲಿಯಾಗಿದ್ದಾರೆ. ಇನ್ನು ದೇಶಾದ್ಯಂತ ಸುಮಾರು 41,789 ಉಷ್ಣ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮಾಹಿತಿ ನೀಡಿದೆ.
NCDC ಮಾಹಿತಿ ಪ್ರಕಾರ, ಮಾ. 1 ಮತ್ತು ಜೂ. 20ರ ನಡುವೆ ಉಷ್ಣ ಮಾರುತಕ್ಕೆ ಬರೋಬ್ಬರಿ 143 ಬಲಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಜನ ಉಷ್ಣ ಮಾರುತಕ್ಕೆ ಬಲಿಯಾಗಿದ್ದು, ಸಾವಿನ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ಇನ್ನು ದೆಹಲಿಯಲ್ಲಿ 21 ಮತ್ತು ಬಿಹಾರ ಹಾಗೂ ರಾಜಸ್ಥಾನಗಳಲ್ಲಿ ತಲಾ 17 ಮಂದಿ ಬಲಿಯಾಗಿದ್ದಾರೆ.
ಹೀಟ್‌ಸ್ಟ್ರೋಕ್‌ನಿಂದಾಗಿ ಹೆಚ್ಚಿನ ಆಸ್ಪತ್ರೆ ಸೇರುತ್ತಿದ್ದು, ಎರಡೇ ದಿನಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಷ್ಣ ಸಂಬಂಧಿ ಕಾಯಿಲೆ, ಆಘಾತಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಎರಡು ದಿನಗಳಲ್ಲಿಯೇ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ 9, ಲೋಕ ನಾಯಕ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ ಇಬ್ಬರು ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿಯೇ ಉಷ್ಣ ಸಂಬಂಧಿ ಕಾಯಿಲೆಗೆ ತುತ್ತಾಗಿರುವ 45 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿಯಲ್ಲಿ ಉಷ್ಣ ಗಾಳಿಯಿಂದಾಗಿ 20 ಜನ ಮೃತಪಟ್ಟಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳಿಗೆ ಹಲವು ಸೂಚನೆ ನೀಡಿದೆ. “ಉಷ್ಣ ಗಾಳಿ, ಸನ್‌ಸ್ಟ್ರೋಕ್, ಹೀಟ್‌ಸ್ಟ್ರೋಕ್‌ನಿಂದಾಗಿ ಆಸ್ಪತ್ರೆ ಸೇರಿದವರಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ ಸೇರಿ ಸಕಲ ವೈದ್ಯಕೀಯ ಸೌಕರ್ಯಗಳು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಕೂಡ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು” ಎಂಬುದಾಗಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಸೂಚನೆ ನೀಡಿದ್ದಾರೆ. ಬೇಸಗೆಯ ಬಿಸಿ ಹೆಚ್ಚಾಗುತ್ತಿರುವ ಕಾರಣ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಜನರಿಗೆ ಹಲವು ಮಾರ್ಗಸೂಚಿ, ಸಲಹೆಗಳನ್ನು ನೀಡಿದೆ. ಅತಿಯಾದ ಬಿಸಿಲು, ಬಿಸಿ ಗಾಳಿಯಿಂದಾಗಿ ಜನ ಹೊರಗೆ ಕಾಲಿಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆಯೂ ತಲೆದೂರಿರುವ ಕಾರಣ ಜನ ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Deep fake Scam: ಮುಖೇಶ್ ಅಂಬಾನಿಯ ಡೀಪ್ ಫೇಕ್ ವಿಡಿಯೋ; ನಿಜವೆಂದೇ ನಂಬಿದ್ದ ವೈದ್ಯೆಗೆ 7 ಲಕ್ಷ ರೂ ವಂಚನೆ