ನವದೆಹಲಿ: ಮುಂಜಾನೆ ಸುರಿದ ಭಾರಿ ಮಳೆಗೆ ರಾಜಧಾನಿ ದಿಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಎದುರಿಸುತ್ತಿದೆ. (Heavy rain in delhi) ಅದರಲ್ಲೂ ಮುಖ್ಯವಾಗಿ ದಿಲ್ಲಿ-ಎನ್‌ಸಿಆರ್ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಗಳು ಮುಳುಗಿದ್ದು ವಾಹನಗಳು ತೇಲುತ್ತಿವೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳ ಸಂಚಾರವೂ ವ್ಯತ್ಯಯಗೊಂಡಿದೆ. ಈ ನಡುವೆ, ಜೈಪುರ ಸೇರಿದಂತೆ ದೇಶದ ನಾನಾ ಭಾಗಗಳಲ್ಲೂ ಭಾರಿ ಮಳೆ ಬೀಳುತ್ತಿದೆ.
ಬೆಳಗ್ಗೆ 5;40ರಿಂದ 7 ಗಂಟೆಯ ಮಧ್ಯೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ಬಿಸಿಯಾಗಿದ್ದ ರಾಜಧಾನಿಗೆ ಒಮ್ಮಿಂದೊಮ್ಮೆ ಚಳಿ ಬಡಿದಂತಾಗಿದೆ. ವಾತಾವರಣದ ಉಷ್ಣಾಂಶ ಒಮ್ಮಿಂದೊಮ್ಮೆಗೇ 29 ಡಿಗ್ರಿಯಿಂದ 18ಕ್ಕೆ ಕುಸಿದಿದೆ. ಗಂಟೆಗೆ 60ರಿಂದ 90 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸುತ್ತಿರುವುದರಿಂದ ಗಾಳಿ-ಮಳೆಯ ಜೋಡಿಯಾಟ ರಾಜಧಾನಿಯನ್ನು ಕಂಗಾಲು ಮಾಡಿದೆ. ಮುಂಜಾನೆ ಏಳುವಾಗಲೇ ಭಾರಿ ಮಳೆ ಮತ್ತು ಗಾಳಿ ಇದ್ದುದರಿಂದ ಜನ ಹೊರಬರುವುದಕ್ಕೇ ಹಿಂದೇಟು ಹಾಕುತ್ತಿದ್ದಾರೆ. ವಾರದ ರಜೆ ಮುಗಿಸಿ ಸೋಮವಾರ ಕಚೇರಿಗೆ ಹೋಗುವವರಿಗೂ ಭಾರಿ ತೊಂದರೆ ಎದುರಾಗಿದೆ.
ಗುರುಗ್ರಾಮದಲ್ಲಿ ನೀರೋ ನೀರು
ಹರಿಯಾಣದ ಗುರುಗ್ರಾಮದಲ್ಲೂ ಭಾರಿ ಮಳೆ ಸುರಿದು ರಸ್ತೆಗಳು ಹೊಳೆಗಳಾಗಿ ಪರಿವರ್ತನೆಯಾಗಿವೆ. ರಾಷ್ಟ್ರೀಯ ಹೆದ್ದಾರಿ – 48ರಲ್ಲಿ ನೀರು ತುಂಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ಇದನ್ನೂ ಓದಿ | ಅಸ್ಸಾಂನಲ್ಲಿ ಮಳೆ ಅಬ್ಬರ; ಪ್ರವಾಹ, ಭೂಕುಸಿತಕ್ಕೆ 8 ಮಂದಿ ಸಾವು
ನಿಜವೆಂದರೆ ಕಡಿಮೆ ಮಳೆ!
ಸಾಮಾನ್ಯವಾಗಿ ದಿಲ್ಲಿಯಲ್ಲಿ ಮಾರ್ಚ್‌ನಿಂದ ಮೇ ನಡುವೆ ಕನಿಷ್ಠ 12-14 ಬಾರಿಯಾದರೂ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತದೆ. ಆದರೆ, ಈ ಬಾರಿ ಕೇವಲ ಐದು ಬಾರಿ ಮಾತ್ರ ಇಂಥ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮಳೆಗಿಂತಲೂ ಬಿಸಿಲೇ ಹೆಚ್ಚು ದರ್ಬಾರು ಮಾಡಿದೆ ಎಂದು ಭಾರತೀಯ ಹವಾಮಾನ ಸಂಸ್ಥೆಯ ಡಾ. ಆರ್. ಕೆ. ಜೇನಮಣಿ ತಿಳಿಸಿದ್ದಾರೆ.
ಇನ್ನಷ್ಟು ಮಳೆ ಸಾಧ್ಯತೆ
ರಾಜಧಾನಿಯಲ್ಲಿ ಮುಂಜಾನೆ ಸ್ವಲ್ಪ ಹೊತ್ತು ಮಳೆ ಬಂದು ಸ್ವಲ್ಪ ತಣ್ಣಗಾಗಿದ್ದರೂ ಮತ್ತೆ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದಲ್ಲೂ ಮುಖ್ಯವಾಗಿ ದಿಲ್ಲಿ, ಎನ್‌ಸಿಆರ್ ಪ್ರದೇಶದಲ್ಲಿ 60-90 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಹಾವೇರಿಯಲ್ಲಿ ಮಳೆಗೆ ಮನೆ ಕಳೆದುಕೊಂಡ ಆರು ಕುಟುಂಬಗಳು
ಅಸ್ಸಾಂ ಇನ್ನೂ ಅಶಾಂತ
ಕಳೆದ ಕೆಲವು ದಿನಗಳಿಂದ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿರುವ ಅಸ್ಸಾಂನಲ್ಲಿ ಸಂಕಷ್ಟ ಪರಿಸ್ಥಿತಿ ಮುಂದುವರಿದಿದೆ. ಭಾನುವಾರ ಇನ್ನೂ ನಾಲ್ವರು ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಾವಿನ ಸಂಖ್ಯೆ 18ಕ್ಕೇರಿದೆ. ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಾಯಲಸೀಮಾ ಪ್ರದೇಶಕ್ಕೆ ಹೊಂದಿಕೊಂಡಂತೆ ಚಂಡಮಾರುತ ಚಲನೆ ನಡೆಯುತ್ತಿರುವುದರಿಂದ ಮುಂದಿನ ನಾಲ್ಕೈದು ದಿನಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.