Site icon Vistara News

Heavy Rain: ಭಾರೀ ಮಳೆಗೆ 4 ಮಂದಿ ಸಾವು; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

rain in tn

rain in tn

ಚೆನ್ನೈ: ಭೀಕರ ಮಳೆಗೆ (Heavy Rain) ತಮಿಳುನಾಡು ಮತ್ತೊಮ್ಮೆ ತತ್ತರಿಸಿದೆ. 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ. ಅಧಿಕಾರಿಗಳು 7,000ಕ್ಕೂ ಹೆಚ್ಚು ನಿವಾಸಿಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿದ್ದಾರೆ. ಸೋಮವಾರ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಚಾಂಗ್ ಚಂಡಮಾರುತವು ಚೆನ್ನೈ ಮತ್ತು ಉತ್ತರ ತಮಿಳುನಾಡಿನಲ್ಲಿ ಭಾರಿ ಹಾನಿಯನ್ನುಂಟು ಮಾಡಿದ ಹದಿನೈದು ದಿನಗಳ ನಂತರ ಇಲ್ಲಿ ಮಳೆ ಮತ್ತೊಮ್ಮೆ ಅನಾಹುತ ಸೃಷ್ಟಿದೆ.

ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು. ಅಲ್ಲಿನ ರಸ್ತೆಗಳು, ಸೇತುವೆಗಳು, ಮನೆಗಳು ಮತ್ತು ಭತ್ತದ ಗದ್ದೆಗಳು ಮುಳುಗಿವೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

ಮಳೆಯ ಕಾರಣದಿಂದ ತಿರುನಲ್ವೇಲಿ, ಕನ್ಯಾಕುಮಾರಿ, ಕೆಂಕಾಶಿ ಮತ್ತು ತೂತುಕುಡಿ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಲವು ಪ್ರದೇಶಗಳಿಗೆ ವಿದ್ಯುತ್‌ ಪೂರೂಕೆ ಸ್ಥಗಿತಗೊಂಡಿದೆ. ಅಲ್ಲದೆ ಮೊಬೈಲ್‌ ಫೋನ್‌ ಸಂಪರ್ಕಕ್ಕೂ ತೊಂದರೆ ಉಂಟಾಗಿದೆ. ದಕ್ಷಿಣ ತಮಿಳುನಾಡು ಮತ್ತು ಮನ್ನಾರ್‌ ಗಲ್ಫ್‌, ಕೊಮೊರಿನ್‌ ಪ್ರದೇಶ, ಲಕ್ಷದ್ವೀಪ ಪ್ರದೇಶಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪರಿಹಾರ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ದೆಹಲಿಗೆ ತೆರಳಿದ್ದಾರೆ. ಏತನ್ಮಧ್ಯೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಗರ್ಭಿಣಿ ಮತ್ತು 1.5 ವರ್ಷದ ಮಗು ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಸುರಕ್ಷಿತವಾಗಿ ಮಧುರೈಗೆ ಕರೆದೊಯ್ಯುವ ವಿಡಿಯೊವನ್ನು ರಕ್ಷಣಾ ಸಚಿವಾಲಯ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಸ್ಟಾಲಿನ್‌ ಹೇಳಿದ್ದೇನು?

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ನಿಧಿಯನ್ನು ಕೋರಿದ್ದೇನೆ ಎಂದು ಹೇಳಿದರು. “ತಕ್ಷಣದ ಪರಿಹಾರಕ್ಕಾಗಿ 7,300 ಕೋಟಿ ರೂ., ಶಾಶ್ವತ ಪರಿಹಾರಕ್ಕಾಗಿ 12,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ” ಎಂದು ಅವರು ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಪುನಃಸ್ಥಾಪಿಸಲು ದಕ್ಷಿಣ ರೈಲ್ವೆಯ ಎಂಜಿನಿಯರಿಂಗ್ ವಿಭಾಗವು ಪ್ರಯತ್ನಿಸುತ್ತಿದೆ. ಬುಧವಾರ ಸಂಜೆಯ ವೇಳೆಗೆ ಮಧುರೈ ಮುಖ್ಯ ಮಾರ್ಗವನ್ನು ಪುನಃಸ್ಥಾಪಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟುಟಿಕೋರಿನ್‌ ಜಿಲ್ಲೆಯ ಶ್ರೀವೈಕುಂಠಂ ನಿಲ್ದಾಣದಲ್ಲಿ ಸಿಲುಕಿದ್ದ 800 ಪ್ರಯಾಣಿಕರ ಪೈಕಿ ಸುಮಾರು 300 ಜನರನ್ನು ನಾಲ್ಕು ರಾಜ್ಯ ಸಾರಿಗೆ ಬಸ್‌ ಮತ್ತು ಎರಡು ಮಿನಿ ವ್ಯಾನ್‌ಗಳ ಸಹಾಯದಿಂದ ಹತ್ತಿರದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ದಾರಿಯಲ್ಲಿ ಸೇತುವೆ ಉಕ್ಕಿ ಹರಿದ ಕಾರಣ ಉಳಿದ ಪ್ರಯಾಣಿಕರನ್ನು ಸಾಗಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Heavy Rain: ತಮಿಳುನಾಡಿನಲ್ಲಿ ಭಾರೀ ಮಳೆ; 4 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ, ರೈಲುಗಳ ಸಂಚಾರ ರದ್ದು

Exit mobile version