ಚೆನ್ನೈ: ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ಅಬ್ಬರಿಸಿದ್ದ ಮಳೆ ಮತ್ತೊಮ್ಮೆ ಧಾರಾಕಾರವಾಗಿ ಸುರಿಯಲು ಆರಂಭಿಸಿದೆ (Heavy Rain). ತಮಿಳುನಾಡಿನಲ್ಲಿ ಭಾನುವಾರ ಭಾರಿ ಮಳೆಯಾಗಿದ್ದು, ಕನ್ಯಾಕುಮಾರಿ, ತಿರುನವ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಕೊಮೊರಿನ್ ಪ್ರದೇಶ ಮತ್ತು ಅದರ ನೆರೆಹೊರೆಯಲ್ಲಿ ಚಂಡಮಾರುತವು ಕಂಡುಬಂದಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ (RMC) ತಿಳಿಸಿದೆ. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಕೆಲವು ರೈಲುಗಳನ್ನು ರದ್ದು ಪಡಿಸಲಾಗಿದೆ.
ಸೋಮವಾರ ಕನ್ಯಾಕುಮಾರಿ, ತಿರುನವ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಬಾಧಿತ ಹಲವು ಕಡೆಗಳಲ್ಲಿ ನೆರೆ ಪರಿಸ್ಥಿತಿ ಮೂಡಿದ್ದು, ಮೊಣಕಾಲಿನವರೆಗೆ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ತಗ್ಗು ಪ್ರದೇಶಗಳಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದೆ ಮತ್ತು ಒಂದೆರಡು ಆಸ್ಪತ್ರೆಗಳ ಆವರಣವೂ ಪ್ರವಾಹಕ್ಕೆ ಸಿಲುಕಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನಗಳು ಸಿಲುಕಿಕೊಂಡಿವೆ. ನಿರಂತರ ಮಳೆಯಿಂದಾಗಿ ರೈಲು ಹಳಿಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ರವಾಹದ ನೀರಿನಲ್ಲಿ ಮುಳುಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Fire engine itself got stuck near V.O.C port ,Thoothukudi#TNRains #Tirunelveli #TamilNadu pic.twitter.com/Sc4PbSgQ4I
— West Coast Weatherman (@RainTracker) December 18, 2023
ಸರ್ಕಾರದಿಂದ ಕ್ರಮ
ತಾಮಿರಬರಣಿ ನದಿ ಉಕ್ಕಿ ಹರಿಯುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಹೆಚ್ಚುವರಿ ನೀರನ್ನು ಕನ್ನಡಿಯನ್ ಕಾಲುವೆಗೆ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೆಚ್ಚುವರಿ ನೀರನ್ನು ಪೆಚಿಪಾರೈ, ಪೆರುಂಜನಿ ಮತ್ತು ಪಾಪನಾಸಂ ಅಣೆಕಟ್ಟುಗಳಿಂದ ಬಿಡುಗಡೆ ಮಾಡಲಾಗುತ್ತಿದೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಸ್ಥಳೀಯ ಜನರಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಸರ್ಕಾರವು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡವನ್ನೂ ನಿಯೋಜಿಸಿದೆ. ಹೆಚ್ಚುವರಿಯಾಗಿ, ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದ್ದಾರೆ.
ಮಳೆ ಪೀಡಿತ ನಾಲ್ಕು ಜಿಲ್ಲೆಗಳಲ್ಲಿನ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಮತ್ತು ಪ್ರಕ್ರಿಯೆಯನ್ನು ವೇಗಗೊಳಿಸಲು ರಾಜ್ಯ ಸರ್ಕಾರ ನಾಲ್ಕು ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ. ಏತನ್ಮಧ್ಯೆ ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಅವರು ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಪ್ರತಿಕೂಲ ಹವಾಮಾನದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ತಿರುನೆಲ್ವೇಲಿಯಲ್ಲಿ ಡಿಸೆಂಬರ್ 16ರ ಬೆಳಗ್ಗೆಯಿಂದ ಡಿಸೆಂಬರ್ 17ರ ವರೆಗೆ ಭಾರಿ ಮಳೆಯಾಗಿದೆ. ಕನ್ಯಾಕುಮಾರಿ, ರಾಮನಾಥಪುರಂ, ಪುದುಕೊಟ್ಟೈ, ತಂಜಾವೂರು, ತಿರುವರೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿಯೂ ಉತ್ತಮ ವರ್ಷಧಾರೆಯಾಗಿದೆ.
ತೂತುಕುಡಿಯ ತಿರುಚೆಂಡೂರಿನಲ್ಲಿ ಸೋಮವಾರ ಮುಂಜಾನೆ 1. 30ರ ವರೆಗೆ 606 ಮಿ.ಮೀ. ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಕನ್ಯಾಕುಮಾರಿ, ತಿರುನೆಲ್ವೇಲಿ, ತೆಂಕಾಸಿ ಮತ್ತು ತೂತುಕುಡಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಆರ್‌ಎಂಸಿ ಮುನ್ಸೂಚನೆ ನೀಡಿದ್ದು, ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ರದ್ದಾದ ರೈಲುಗಳ ವಿವರ
- ತಿರುನೆಲ್ವೇಲಿ-ತಿರುಚೆಂಡೂರ್ ಅನ್ರಿಸರ್ವಡ್ ಸ್ಪೆಷಲ್
- ತಿರುಚೆಂಡೂರ್-ತಿರುನೆಲ್ವೇಲಿ ಅನ್ರಿಸರ್ವಡ್ ಸ್ಪೆಷಲ್
- ತಿರುನೆಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್ಪ್ರೆಸ್
- ಚೆನ್ನೈ ಎಗ್ಮೋರ್-ತಿರುನೆಲ್ವೇಲಿ ವಂದೇ ಭಾರತ್ ಎಕ್ಸ್ಪ್ರೆಸ್
- ತಿರುನೆಲ್ವಿ-ಜಾಮ್ನಗರ್ ಎಕ್ಸ್ಪ್ರೆಸ್
- ತಿರುಚೆಂಡೂರ್-ಪಾಲಕ್ಕಾಡ್ ಎಕ್ಸ್ಪ್ರೆಸ್
- ವಾಂಚಿ ಮಣಿಯಾಚಿ-ಟ್ಯುಟಿಕೋರಿನ್ ಅನ್ರಿಸರ್ವಡ್ ಸ್ಪೆಷಲ್
- ಟ್ಯುಟಿಕೋರಿನ್-ವಾಂಚಿ ಮಣಿಯಾಚಿ ಅನ್ರಿಸರ್ವಡ್ ಸ್ಪೆಷಲ್
- ತಿರುನೆಲ್ವೇಲಿ-ಟ್ಯುಟಿಕೋರಿನ್ ಅನ್ರಿಸರ್ವಡ್ ಸ್ಪೆಷಲ್
- ಟ್ಯುಟಿಕೋರಿನ್-ತಿರುನೆಲ್ವೇಲಿ ಅನ್ರಿಸರ್ವಡ್ ಸ್ಪೆಷಲ್
ಇದನ್ನೂ ಓದಿ: Karnataka Weather : ಕೊರೆಯುವ ಚಳಿಯೊಂದಿಗೆ ಇಲ್ಲೆಲ್ಲ ಮಳೆಯ ಸಿಂಚನ