Site icon Vistara News

Heavy Rain: 10 ಮಂದಿಯನ್ನು ಬಲಿ ಪಡೆದ ಮಳೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

tn rain

tn rain

ಚೆನ್ನೈ: ಕೆಲವು ದಿನಗಳ ಹಿಂದೆ ಪ್ರವಾಹದಿಂದ ತತ್ತರಿಸಿದ್ದ ತಮಿಳುನಾಡು ಮತ್ತೊಮ್ಮೆ ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದೆ. ಈ ಮಳೆಯ ಹೊಡೆತಕ್ಕೆ ಸಿಲುಕಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ(Heavy Rain). ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಹದಿನೈದು ದಿನಗಳ ಹಿಂದೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತದಿಂದಾದ ಹಾನಿ ಭಾರೀ ಮಳೆಯಿಂದಾಗಿ ದಕ್ಷಿಣ ಜಿಲ್ಲೆಗಳಲ್ಲಿ ಉಂಟಾದ ನಾಶ ನಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮನವಿ ಸಲ್ಲಿಸಿದರು. ವಿಪತ್ತು ಪರಿಹಾರ ನಿಧಿಯನ್ನು ಒದಗಿಸುವಂತೆಯೂ ಅವರು ಆಗ್ರಹಿಸಿದರು.

ಈತನ್ಮಧ್ಯೆ ಟುಟಿಕೋರಿನ್‌ ಜಿಲ್ಲೆಯ ಶ್ರೀವೈಕುಂಠಂ ರೈಲು ನಿಲ್ದಾಣದಲ್ಲಿ 40 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಎಲ್ಲ 800 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಸಂಬಂಧಿತ ಘಟನೆಗಳಲ್ಲಿ ತಿರುನೆಲ್ವೇಲಿ ಮತ್ತು ಟ್ಯುಟಿಕೋರಿನ್ ಜಿಲ್ಲೆಗಳಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಕೆಲವರು ಗೋಡೆ ಕುಸಿತದಿಂದ ಮತ್ತು ಕೆಲವರು ವಿದ್ಯುತ್ ಆಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೇಂದ್ರ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದ್ದಾರೆ.

ಸಿಎಂ ಹೇಳಿದ್ದೇನು?

ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್‌, ʼʼನಿರಂತರ ಮಳೆಯಿಂದಾಗಿ ಉಂಟಾದ ಹಾನಿಯು 100 ವರ್ಷಗಳ ಇತಿಹಾಸದಲ್ಲೇ ಅತೀ ಹೆಚ್ಚಿನದ್ದುʼʼ ಎಂದು ಹೇಳಿದ್ದಾರೆ. ʼʼತಿರುನೆಲ್ವೇಲಿ, ಟುಟಿಕೋರಿನ್, ಕನ್ಯಾಕುಮಾರಿ ಮತ್ತು ತೆಂಕಾಸಿ ಜಿಲ್ಲೆಗಳ ಜನರ ಸಹಾಯಕ್ಕಾಗಿ ಡಿಆರ್‌ಎಫ್‌ನಿಂದ 2,000 ಕೋಟಿ ರೂ. ಒದಗಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.

ನಿರಂತರ ಕಾರ್ಯಾಚರಣೆ

ಕೆಲವು ದಿನಗಳಿಂದ ಅಬ್ಬರಿಸಿದ್ದ ಮಳೆಯ ಪ್ರಮಾಣ ಮಂಗಳವಾರದಿಂದ ಕಡಿಮೆಯಾಗಿದೆ. ಆದರೂ ಕೆಲವು ಪ್ರದೇಶಗಳ ನೆರೆ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ. ನೀರಿನ ಮಟ್ಟ ಇಳಿಕೆಯಾಗಿಲ್ಲ. ಹೀಗಾಗಿ ವಾಯುಪಡೆ, ಸೇನೆ ಮತ್ತು ನೌಕಾಪಡೆ ಸಿಬ್ಬಂದಿ ಮಳೆ ಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಕರಾವಳಿ ಪ್ರದೇಶಗಳು ಅದರಲ್ಲೂ ಟ್ಯುಟಿಕೋರಿನ್ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ. ಸಮುದ್ರ ಮತ್ತು ತೀರದ ಸ್ಥಳಗಳ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಿಬ್ಬಂದಿ ಸಜ್ಜಾಗಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ 160 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ಸುಮಾರು 17,000 ಜನರಿಗೆ ಈ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಈವರೆಗೆ ಒಟ್ಟು ಒಂಬತ್ತು ಹೆಲಿಕಾಪ್ಟರ್‌ಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಒಂದು ಹೆಲಿಕಾಪ್ಟರ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲ್ಪಟ್ಟ ಜನರ ಆರೋಗ್ಯ ಪರೀಕ್ಷೆ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು 133 ಸಂಚಾರಿ ವೈದ್ಯಕೀಯ ತಂಡಗಳನ್ನು ಸಿದ್ಧವಾಗಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Heavy Rain: ಭಾರೀ ಮಳೆಗೆ 4 ಮಂದಿ ಸಾವು; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Exit mobile version