Site icon Vistara News

Heavy Rainfall: ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, ಭೂಕುಸಿತದಿಂದ ಸಂಪರ್ಕ ಕಡಿತ

Heavy Rainfall

Heavy Rainfall

ಗ್ಯಾಂಗ್ಟಾಕ್: ಭಾರೀ ಮಳೆ (Heavy Rainfall)ಯ ಹೊಡೆತಕ್ಕೆ ಸಿಲುಕಿರುವ ಸಿಕ್ಕಿಂನಲ್ಲಿ ಭೀಕರ ಪ್ರವಾರ ಪರಿಸ್ಥಿತಿ ತಲೆದೋರಿದ್ದು, ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂ ಭಾಗದ ಸಂಪರ್ಕ ಕಡಿತವಾಗಿದೆ. ಜತೆಗೆ ತೀಸ್ತಾ ನದಿಯು ಉಕ್ಕಿ ಹರಿಯುತ್ತಿದೆ. ನೂರಾರು ನಿವಾಸಿಗಳನ್ನು ಸುರಕ್ಷಿತ ಕಡೆಗೆ ಸ್ಥಳಾಂತರಿಸಲಾಗಿದೆ.

ʼʼಉತ್ತರ ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭಾರಿ ಭೂಕುಸಿತದಿಂದಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1,500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದಾರೆʼʼ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ʼʼಸಾಂಗ್ಕಲಾಂಗ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಬೈಲಿ ಸೇತುವೆ ಕುಸಿದಿದ್ದು, ಮಂಗನ್, ಡ್ಜೋಂಗು ಮತ್ತು ಚುಂಗ್ಥಾಂಗ್ ನಡುವಿನ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಭೂಕುಸಿತವು ಸಂಭವಿಸಿದ್ದು, ಮನೆಗಳು ಜಲಾವೃತಗೊಂಡಿವೆ. ಹಲವಾರು ವಿದ್ಯುತ್ ಕಂಬಗಳು ಕೊಚ್ಚಿಹೋಗಿವೆʼʼ ಎಂದು ಅವರು ವಿವರಿಸಿದ್ದಾರೆ.

ಗುರುಡೊಂಗ್ಮಾರ್ ಸರೋವರ ಮತ್ತು ಯುಂಥಂಗ್ ಕಣಿವೆಯಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾದ ಮಂಗನ್ ಜಿಲ್ಲೆಯ ಡ್ಜೋಂಗು, ಚುಂಗ್ಥಾಂಗ್, ಲಾಚೆನ್ ಮತ್ತು ಲಾಚುಂಗ್‌ ಮುಂತಾದ ನಗರಗಳು ಈಗ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿವೆ. “ಪಕ್ಸೆಪ್ ಮತ್ತು ಅಂಭಿಥಾಂಗ್ ಗ್ರಾಮಗಳಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ಗೆಥಾಂಗ್ ಮತ್ತು ನಂಪಥಾಂಗ್‌ನಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಸ್ಥಳಾಂತರಗೊಂಡ ಜನರಿಗಾಗಿ ಪಾಶೆಪ್‌ನಲ್ಲಿ ಪರಿಹಾರ ಶಿಬಿರವನ್ನು ಸ್ಥಾಪಿಸಲಾಗಿದೆʼʼ ಎಂದು ಮಂಗನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮ್ ಕುಮಾರ್ ಚೆಟ್ರಿ ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದ ಮಂಗನ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾದ ಪರಿಸ್ಥಿತಿಯನ್ನು ಪರಿಶೀಲಿಸಲು ಹೇಮ್ ಕುಮಾರ್ ಚೆಟ್ರಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಉತ್ತರ ಸಿಕ್ಕಿಂನಲ್ಲಿ ಮೊಬೈಲ್ ನೆಟ್‌ವರ್ಕ್‌ ಸಂಪರ್ಕ ಕಡಿತಕೊಂಡಿರುವುದು ಕೂಡ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟು ಮಾಡಿದೆ.

ಪ್ರವಾಸಿಗರಿಗೆ ಸೂಚನೆ

ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ಸಂಪರ್ಕವನ್ನು ಸ್ಥಾಪಿಸುವವರೆಗೆ ಸಿಕ್ಕಿಬಿದ್ದ ಪ್ರವಾಸಿಗರು ಈಗಿರುವ ಸ್ಥಳದಲ್ಲಿಯೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಪ್ರದೇಶದಲ್ಲಿನ ಸಂಪರ್ಕವನ್ನು ಪುನಃಸ್ಥಾಪಿಸಲು ಫಿಡಾಂಗ್‌ನಲ್ಲಿ ಸೇತುವೆಯನ್ನು ತ್ವರಿತವಾಗಿ ನಿರ್ಮಿಸಲು ಮಂಗನ್ ಜಿಲ್ಲಾಡಳಿತವು ಮುಂದಾಗಿದ್ದು, ಕಾಮಗಾರಿ ಆರಂಭಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

ಸದ್ಯ ಸಿಕ್ಕಿಂ ಮುಖ್ಯಮಂತ್ರಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (Sikkim Chief Minister Prem Singh Tamang) ಅವರು ಅರುಣಾಚಲ ಪ್ರದೇಶಕ್ಕೆ ತೆರಳಿದ್ದು, ಅಲ್ಲಿನ ಮುಖ್ಯಮಂತ್ರಿ ಪೇಮಾ ಖಂಡು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಅಲ್ಲಿಂದಲೇ ಅವರು ಪರಿಹಾರ ಕಾರ್ಯ ತ್ವರಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಅವರು ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಅಪ್ಪಳಿಸಿದ್ದ ಪ್ರವಾಹದಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದರು.

Exit mobile version