ಅಯೋಧ್ಯೆ: ಭವ್ಯ ರಾಮಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಹಬ್ಬ, ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರವನ್ನು (Ram Mandir) ಉದ್ಘಾಟಿಸಲಿದ್ದಾರೆ. ಹಾಗಾಗಿ, ಲಕ್ಷಾಂತರ ಜನ ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಇದರ ಬೆನ್ನಲ್ಲೇ, ಅಯೋಧ್ಯೆಗೆ ಭೇಟಿ ನೀಡುವವರಿಗಾಗಿ ರಾಜ್ಯ ಸರ್ಕಾರವು ಹೆಲಿಕಾಪ್ಟರ್ ಸೇವೆ ಆರಂಭಿಸಿದೆ. ಶುಕ್ರವಾರ (ಜನವರಿ 19) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌನಿಂದ ಅಯೋಧ್ಯೆಗೆ ಹೆಲಿಕಾಪ್ಟರ್‌ಗಳ ಸೇವೆಗೆ ಚಾಲನೆ ನೀಡಲಿದ್ದಾರೆ.
ಹೆಲಿಕಾಪ್ಟರ್ ಪ್ರಯಾಣದ ಟಿಕೆಟ್ ಬೆಲೆ ಎಷ್ಟು?
ಯೋಗಿ ಆದಿತ್ಯನಾಥ್ ಅವರು ಲಖನೌ ಹಾಗೂ ವಾರಾಣಸಿ ಸೇರಿ ಹಲವು ಜಿಲ್ಲೆಗಳಿಂದ ಅಯೋಧ್ಯೆಗೆ ಹೆಲಿಕಾಪ್ಟರ್ ಸೇವೆಗೆ ಚಾಲನೆ ನೀಡಲಿದ್ದಾರೆ. ಒಂದು ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಸಬಹುದಾಗಿದ್ದು, ವಾರಾಣಸಿಯ ನಮೋ ಘಾಟ್‌ನಿಂದ ಅಯೋಧ್ಯೆಗೆ ಒಬ್ಬರಿಗೆ 14,159 ರೂ. ನಿಗದಿಪಡಿಸಲಾಗಿದೆ. ಹಾಗೆಯೇ, ಇಷ್ಟೇ ಮೊತ್ತ ಪಾವತಿಸಿ ಲಖನೌನ ರಾಮ್‌ಬಾಯ್‌ನಿಂದ ಅಯೋಧ್ಯೆಗೆ ಹೆಲಿಕಾಪ್ಟರ್ ಮೂಲಕ ತೆರಳಬಹುದಾಗಿದೆ. ವಾರಾಣಸಿಯಿಂದ 55 ನಿಮಿಷ ಹಾಗೂ ಲಕನೌನಿಂದ 45 ನಿಮಿಷದಲ್ಲಿ ಅಯೋಧ್ಯೆ ತಲುಪಬಹುದಾಗಿದೆ.
ಒಂದು ಹೆಲಿಕಾಪ್ಟರ್‌ನಲ್ಲಿ 400 ಕೆಜಿ ತೂಕದ ಸಾಮರ್ಥ ಇರುವುದರಿಂದ ಐವರು ಯಾತ್ರಿಕರು ಮಾತ್ರ ಪ್ರಯಾಣಿಸಬಹುದಾಗಿದೆ. ಭಕ್ತಾದಿಗಳು 5 ಕೆ.ಜಿ ತೂಕದ ಬ್ಯಾಗ್ ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಹತ್ತಾರು ಜಿಲ್ಲೆಗಳಿಂದ ಹೆಲಿಕಾಪ್ಟರ್ ಸೇವೆ ಆರಂಭಿಸುವ ಗುರಿಯನ್ನು ಯೋಗಿ ಆದಿತ್ಯನಾಥ್ ಅವರು ಹೊಂದಿದ್ದಾರೆ. ಬರ್ಸಾನ, ಮಥುರಾ ಹಾಗೂ ಆಗ್ರಾ ಎಕ್ಸ್‌ಪ್ರೆಸ್ ವೇ ಮೂಲಕವೂ ಹೆಲಿಕಾಪ್ಟರ್‌ನಲ್ಲಿ ಅಯೋಧ್ಯೆಗೆ ತೆರಳಬಹುದಾಗಿದ್ದು, 135 ನಿಮಿಷಗಳ ಪ್ರಯಾಣಕ್ಕೆ 35,399 ರೂ. ನಿಗದಿಪಡಿಸಲಾಗಿದೆ.
ಇನ್ನು ಅಯೋಧ್ಯೆ ನಗರವನ್ನು ಕೂಡ ಹೆಲಿಕಾಪ್ಟರ್ ಮೂಲಕ ದರ್ಶನ ಮಾಡಬಹುದಾಗಿದ್ದು, 3,539 ರೂ. ನಿಗದಿಪಡಿಸಲಾಗಿದೆ. ರಾಮಮಂದಿರ, ಹನುಮಾನ್‌ಗಢಿ, ಸರಯೂ ನದಿಯನ್ನು ಹೆಲಿಕಾಪ್ಟರ್ ಮೂಲಕವೇ ವೀಕ್ಷಿಸಬಹುದಾಗಿದೆ. ಸುಮಾರು 15 ನಿಮಿಷಗಳ ಸಂಚಾರ ಇದಾಗಿರಲಿದೆ. ಎಲ್ಲ ಹೆಲಿಕಾಪ್ಟರ್ ಪ್ರಯಾಣಕ್ಕೆ ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?
ಬಿಗಿ ಬಂದೋಬಸ್ತ್
ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಉನ್ನತ ಮಟ್ಟದ ನಾಯಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಾತ್ರವಲ್ಲ ಸಮಾರಂಭದ ದಿನ ಡ್ರೋನ್ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್ ಹಾರಾಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆ್ಯಂಟಿ ಡ್ರೋನ್ ಸಿಸ್ಟಮ್ (Anti-drone system) ಜಾರಿಗೊಳಿಸಲಾಗುವುದು ಎಂದು ಭದ್ರತಾ ಎಸ್‌ಪಿ ಗೌರವ್ ವನ್ಸ್‌ವಾಲ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ