ರಾಂಚಿ: ಕಲ್ಲು ಗಣಿಗಾರಿಕೆ ಗುತ್ತಿಗೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರ ತಲೆದಂಡವಾಗಿದೆ. ಅವರನ್ನು ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ಶಿಫಾರಸು ಮಾಡಿದ ಬೆನ್ನಲ್ಲೇ ಅನರ್ಹಗೊಳಿಸಲು ರಾಜ್ಯಪಾಲರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅನರ್ಹತೆ ಕುರಿತ ಆದೇಶವೂ ಸಿದ್ಧವಾಗಿದ್ದು, ಕಾನೂನಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಜಾರ್ಖಂಡ್ ರಾಜಭವನದ ಮೂಲಗಳು ತಿಳಿಸಿವೆ.
ಚುನಾವಣೆ ಆಯೋಗದ ನಿಯಮಗಳ ಪ್ರಕಾರ ಒಬ್ಬ ಮುಖ್ಯಮಂತ್ರಿ ಅನರ್ಹಗೊಂಡರೆ, ಆ ಹುದ್ದೆ ಖಾಲಿಯಾದರೆ ಆರು ತಿಂಗಳಲ್ಲಿ ಬೇರೊಬ್ಬ ಮುಖ್ಯಮಂತ್ರಿಯ ಆಯ್ಕೆಯಾಗಬೇಕು. ಅದರಂತೆ, ಹೇಮಂತ್ ಸೊರೆನ್ ಅವರು ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ಪತ್ನಿ ಕಲ್ಪನಾ ಸೊರೆನ್ ಅವರು ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಹೇಮಂತ್ ಸೊರೆನ್ ಅವರ ಕಲ್ಲು ಗಣಿಗಾರಿಕೆ ಒಡೆತನದ ಗುತ್ತಿಗೆಯನ್ನು ತಾವೇ ವಿಸ್ತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೊರೆನ್ ವಿರುದ್ಧ ಬಿಜೆಪಿ ದೂರು ನೀಡಿದೆ. ಅದರಂತೆ, ತನಿಖೆ ನಡೆಸಿದ ಚುನಾವಣೆ ಆಯೋಗವು ಅವರನ್ನು ಅನರ್ಹಗೊಳಿಸಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ | Hemant Soren | ಜಾರ್ಖಂಡ್ ಮುಖ್ಯಮಂತ್ರಿ ಅನರ್ಹತೆಗೆ ಶಿಫಾರಸು ಏಕೆ? ಏನಿದು ಪ್ರಕರಣ?