ರಾಂಚಿ: ಅಕ್ರಮ ಹಣ ವರ್ಗಾವಣೆ (Money laundering Case), ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳಿಂದ ಬಂಧಿತರಾಗಿ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್ ಸೊರೆನ್ (Hemant Soren) ಅವರು ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಲಿ ಸಿಎಂ ಚಂಪೈ ಸೊರೆನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೇಮಂತ್ ಸೊರೆನ್ ಅವರು ಮೂರನೇ ಬಾರಿಗೆ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಹೇಮಂತ್ ಸೊರೆನ್ ಅವರ ಬಂಧನವಾದ ಬಳಿಕ ಅವರ ಆಪ್ತ ಚಂಪೈ ಸೊರೆನ್ ಅವರು ಫೆಬ್ರವರಿ 2ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಆಡಳಿತಾರೂಢ ಮೈತ್ರಿಕೂಟವು ಹೇಮಂತ್ ಸೊರೆನ್ ಅವರು ಮತ್ತೆ ಸಿಎಂ ಆಗಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
Executive President of JMM #HemantSoren is all set to take over the reins of #Jharkhand again.
— All India Radio News (@airnewsalerts) July 3, 2024
The decision to install Hemant Soren as new CM was taken at the meeting of INDIA alliance MLAs comprising JMM, Congress and RJD.
This meeting was held at official residence of CM… pic.twitter.com/sPDkttnoC7
ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್ ಸೊರೆನ್ ಅವರಿಗೆ 9 ಬಾರಿ ಸಮನ್ಸ್ ಜಾರಿಗೊಳಿಸಿದ್ದರು. ಆದರೆ ಹೇಮಂತ್ ಸೊರೆನ್ ಅವರು ಪ್ರತಿ ಬಾರಿ ಸಮನ್ಸ್ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್ ಸೊರೆನ್ ಅವರನ್ನು ಈ ವರ್ಷದ ಜನವರಿ 31ರಂದು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೆನ್ ಅವರು ರಾಜೀನಾಮೆ ನೀಡಿದ್ದರು.
ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್ ಸೊರೆನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: Arvind Kejriwal: ಅರವಿಂದ ಕೇಜ್ರಿವಾಲ್ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ