Site icon Vistara News

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Hemchand Manjhi

Hemchand Manjhi, traditional medicine practitioner, to return Padma Shri amid naxalite threats

ರಾಯ್‌ಪುರ:‌ ದೇಶದಲ್ಲಿ ಮತ್ತೆ ಪ್ರಶಸ್ತಿ ವಾಪ್ಸಿ ಅಭಿಯಾನ ಆರಂಭವಾಗಿದೆ. ಛತ್ತೀಸ್‌ಗಢದ ಪ್ರಮುಖ ಆಯುರ್ವೇದ ವೈದ್ಯ ಹೇಮಚಂದ್‌ ಮಾಂಝಿ (Hemchand Manjhi) ಅವರು ಕಳೆದ ತಿಂಗಳಷ್ಟೇ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri Award) ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನಿಸಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿಗಳು (Naxalites) ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಅವರು ತೀರ್ಮಾನಿಸಿದ್ದಾರೆ.

ನಾರಾಯಣಪುರ ಜಿಲ್ಲೆಯ ಛೋಟೆಡೊಂಗರ್‌ ಗ್ರಾಮದವರಾದ ಹೇಮಚಂದ್‌ ಮಾಂಝಿ ಅವರು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿ (ಆಯುರ್ವೇದ, ಸಿದ್ಧ, ಹೋಮಿಯೋಪತಿ, ಯುನಾನಿ) ಮೂಲಕ ಜನರ ರೋಗಗಳನ್ನು ನಿವಾರಣೆ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಕಳೆದ ಏಪ್ರಿಲ್‌ನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಮಚಂದ್‌ ಮಾಂಝಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೀಗ, ಒಂದೇ ತಿಂಗಳಲ್ಲಿ ಹೇಮಚಂದ್‌ ಮಾಂಝಿ ಅವರು ಪ್ರಶಸ್ತಿ ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ.

ಪ್ರಶಸ್ತಿ ವಾಪಸ್‌ಗೆ ಕಾರಣವೇನು?

ನಾರಾಯಣಪುರ ಜಿಲ್ಲೆಯ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿಯಾಗಿದೆ. ಇತ್ತೀಚೆಗೆ ಚಮೇಲಿ ಹಾಗೂ ಗೌರ್‌ದಂಡ್‌ ಗ್ರಾಮಗಳಲ್ಲಿ ಎರಡು ಮೊಬೈಲ್‌ ಟವರ್‌ಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲ, ಹೇಮಚಂದ್‌ ಮಾಂಝಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಬ್ಯಾನರ್‌ಗಳನ್ನು ನಕ್ಸಲರು ಎಲ್ಲೆಡೆ ಅಳವಡಿಸಿದ್ದಾರೆ. ಹೇಮಚಂದ್‌ ಮಾಂಝಿ ಅವರ ವಿರುದ್ಧ ಘೋಷಣೆ ಇರುವ ಬ್ಯಾನರ್‌ಗಳನ್ನು ಕೂಡ ಹಾಕಿದ್ದಾರೆ. ಇದರಿಂದಾಗಿ ಮನನೊಂದು ಹೇಮಚಂದ್‌ ಮಾಂಝಿ ಅವರು ಪ್ರಶಸ್ತಿ ವಾಪಸ್‌ ನೀಡುವ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೇಮಚಂದ್‌ ಮಾಂಝಿಗೆ ಜೀವ ಬೆದರಿಕೆ

ಮಾವೋವಾದಿಗಳು ಹೇಮಚಂದ್‌ ಮಾಂಝಿ ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. “ನನಗೆ ಹೇಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತು ಎಂಬುದು ನಕ್ಸಲರ ಪ್ರಶ್ನೆಯಾಗಿದೆ. ನಾನು ಕಳೆದ ಹಲವು ದಶಕಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಜನರಿಗೆ ನೀಡುವ ಮೂಲಕ ಅವರ ಸೇವೆ ಮಾಡಿದ್ದೇನೆ. ಕ್ಯಾನ್ಸರ್‌ಗೂ ಔಷಧ ನೀಡಿದ್ದೇನೆ. ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆಯೇ ಹೊರತು, ನಾನಾಗೇ ಕೇಳಿ ಪಡೆದಿಲ್ಲ. ಇದಕ್ಕೂ ಮೊದಲು ನಕ್ಸಲರು ನನ್ನ ಸಂಬಂಧಿಯನ್ನು ಹತ್ಯೆ ಮಾಡಿದ್ದರು. ಈಗ ಇಡೀ ಕುಟುಂಬವು ಭಯದಲ್ಲಿಯೇ ಕಾಲ ಕಳೆಯುತ್ತಿದೆ. ಹಾಗಾಗಿ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ತೀರ್ಮಾನಿಸಿದ್ದೇನೆ” ಎಂದು ಹೇಮಚಂದ್ ಮಾಂಝಿ ತಿಳಿಸಿದ್ದಾರೆ.

ಇದನ್ನೂ ಓದಿ: ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಸ್​ ಮಾಡುವ ನಿರ್ಧಾರ ಘೋಷಿಸಿ ಮೋದಿಗೆ ಪತ್ರ ಬರೆದ ವಿನೇಶ್‌ ಫೋಗಟ್

Exit mobile version