ಲಖನೌ: ಲವ್ ಜಿಹಾದ್(Love Jihad), ಭೂಮಿ ಜಿಹಾದ್ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಇದೀಗ ಹೆನ್ನಾ ಜಿಹಾದ್(Henna Jihad) ವಿಚಾರ ಭಾರೀ ಸದ್ದು ಮಾಡುತ್ತಿದೆ. ಮುಜಾಫರ್‌ನಗರದಲ್ಲಿ ಹರಿಯಲಿ ತೀಜ್ ಹಬ್ಬದ ಸಂದರ್ಭದಲ್ಲಿ ಮೆಹಂದಿ ಹಚ್ಚುವ ಕುರಿತು ಹೊಸ ವಿವಾದ ಹುಟ್ಟಿಕೊಂಡಿದೆ. ಈ ಹಬ್ಬದ ಸಂದರ್ಭದಲ್ಲಿ ಯಾವುದೇ ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಕಂಡುಬಂದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕ್ರಾಂತಿ ಸೇನೆಯ ಮಹಿಳಾ ಮೋರ್ಚಾ ಘೋಷಿಸಿದೆ.
ಕ್ರಾಂತಿ ಸೇನಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂನಂ ಚೌಧರಿ ಮಾತನಾಡಿ, ಹರಿಯಲಿ ತೀಜ್ ಹಿಂದೂಗಳಿಗೆ ಮಹತ್ವದ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಯಾವುದೇ ಹಿಂದೂ ಮಹಿಳೆ ಮುಸ್ಲಿಂ ಯುವಕರಿಂದ ಮೆಹಂದಿ ಹಚ್ಚಿಸಿಕೊಳ್ಳಬಾರದು. ಇದು ಅವರ ಹಬ್ಬಕ್ಕೆ ಅಗೌರವ ಎಂದು ಪರಿಗಣಿಸಲಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಯಾವುದೇ ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಕಂಡುಬಂದರೆ ಕ್ರಾಂತಿ ಸೇನೆಯು ತಮ್ಮ ಕೈಗೆತ್ತಿಕೊಳ್ಳುತ್ತದೆ ಎಂದು ಪೂನಂ ಚೌಧರಿ ಎಚ್ಚರಿಸಿದ್ದಾರೆ.
ಕ್ರಾಂತಿ ಸೇನಾ ವಾಡಿಕೆಯಂತೆ ಇಂತಹ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಯಾವುದೇ ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತದೆ, ಏಕೆಂದರೆ ಅದು ಅವರ ಧರ್ಮಕ್ಕೆ ಅವಮಾನ ಎಂದು ಅವರು ನಂಬುತ್ತಾರೆ. ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿಗಳ ಲೇಬಲ್‌ಗೆ ಸಂಬಂಧಿಸಿದಂತೆ ಮುಜಫರ್‌ನಗರದಲ್ಲಿ ಈ ಹಿಂದೆ ವಿವಾದ ಉಂಟಾಗಿತ್ತು. ಇದೀಗ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮೆಹಂದಿ ಹಚ್ಚುವ ವಿಚಾರ ಬಹಳ ಸದ್ದು ಮಾಡುತ್ತಿದೆ.
ಏನಿದು ಹರಿಯಲಿ ತೀಜ್ ಹಬ್ಬ?
ಹರಿಯಲಿ ತೀಜ್ ಉತ್ತರ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಪ್ರಮುಖ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ತೃತೀಯದಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ, ಶ್ರಾವಣ ಮಾಸದಲ್ಲಿ ಬೀಳುವ ತೀಜ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ತೀಜ್ ಹಬ್ಬವನ್ನು ಪಾರ್ವತಿ ದೇವಿಗೆ ಸಮರ್ಪಿಸಲಾಗಿದೆ.
ಈ ಮಂಗಳಕರ ಹಬ್ಬದಂದು, ಪಾರ್ವತಿ ದೇವಿಗೆ ಪೂಜೆ, ಉಪವಾಸ ಇತ್ಯಾದಿಗಳನ್ನು ಮಾಡುವ ವಿಧಿ ಇದೆ ಮತ್ತು ಜನರು ಈ ದಿನ ಹಲವಾರು ಮೇಕಪ್ ವಸ್ತುಗಳನ್ನು ದಾನ ಮಾಡುತ್ತಾರೆ. ಈ ಉಪವಾಸದ ಸಮಯದಲ್ಲಿ, ವಿವಾಹಿತ ಮಹಿಳೆಯರು ಹಸಿರು ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಮೆಹೆಂದಿಯನ್ನು ಹಚ್ಚುತ್ತಾರೆ. ಪಂಚಾಂಗದ ಪ್ರಕಾರ, ಹರಿಯಲಿ ತೀಜ್ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. 2024 ರಲ್ಲಿ, ಹರಿಯಲಿ ತೀಜ್ ಹಬ್ಬವನ್ನು ಆಗಸ್ಟ್ 7 ರಂದು ಬುಧವಾರ ಆಚರಿಸಲಾಗುತ್ತದೆ.
ಕೆಲವು ದಿನಗಳ ಹಿಂದೆ ಲವ್ ಜಿಹಾದ್ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ಲವ್ ಜಿಹಾದ್‌ನಲ್ಲಿ ತೊಡಗುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ (ತಿದ್ದುಪಡಿ) ವಿಧೇಯಕಕ್ಕೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ರಾಜ್ಯಪಾಲರ ಅಂಕಿತ ಸಿಕ್ಕರೆ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದರೆ, ಲವ್ ಜಿಹಾದ್‌ನಲ್ಲಿ ತೊಡಗಿಸಿಕೊಂಡವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ:Love Jihad: ಲವ್ ಜಿಹಾದ್ ವಿರುದ್ಧ ಯೋಗಿ ದಿಟ್ಟ ಕ್ರಮ; ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ!