Site icon Vistara News

Odisha Train Accident : ಭಾರತದಲ್ಲಿ ಸಂಭವಿಸಿದ 10 ಭೀಕರ ರೈಲು ಅಪಘಾತಗಳ ವಿವರ ಇಲ್ಲಿದೆ

Odisha Train Accident

#image_title

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ನಡೆದ ರೈಲು ದುರಂತದಲ್ಲಿ (Odisha Train Accident) 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನ ಐದಾರು ಬೋಗಿಗಳು ಹಳಿತಪ್ಪಿ ಬಿದ್ದಿದ್ದು, 300ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚನ ಜನರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ರೈಲು ಅವಘಡ ಎನಿಸಿಕೊಂಡಿದೆ. ನೂತನ ತಂತ್ರಜ್ಞಾನ, ಅತ್ಯಾಧುನಿಕ ಸಂಪರ್ಕ ಸಾಧನಗಳು ಹಾಗೂ ಮೂಲ ಸೌಕರ್ಯದ ಅಭಿವೃದ್ಧಿಯಿಂದಾಗಿ ರೈಲು ಅವಘಡಗಳ ಸಂಖ್ಯೆ ಕಡಿಮೆಯಾಗಿತ್ತು. ಆದಾಗ್ಯೂ ದುರದೃಷ್ಟವಶಾತ್​ ದೊಡ್ಡ ಪ್ರಮಾಣದ ಅಪಘಾತ ನಡೆದಿದೆ. ಈ ವೇಳೆ ಈ ಹಿಂದೆ ಭಾರತದಲ್ಲಿ ನಡೆದಿರುವ ಅತ್ಯಂತ ಭೀಕರ ರೈಲು ಅವಘಡಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

1- 1981ರ ಬಿಹಾರ ರೈಲು ದುರಂತ

ಬಿಹಾರದ ಸಹರ್ಸಾ ಬಳಿ ಈ ದುರಂತ ನಡೆದಿತ್ತು. ಸುಮಾರು 900 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ಹಳಿ ತಪ್ಪಿ ಭಾಗಮತಿ ನದಿಗೆ ಬಿದ್ದಿತ್ತು. ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಮೃತಪಟ್ಟಿದ್ದರು.

2- 1995 ಫಿರೋಜಾಬಾದ್ ರೈಲು ದುರಂತ

ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ 1985ರಲ್ಲಿ ಈ ದುರ್ಘಟನೆ ಸಂಭವಿಸಿತ್ತು. ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್ ಎಕ್ಸ್​​ಪ್ರೆಸ್​ ನಿಂತಿದ್ದ ಕಾಳಿಂದಿ ಎಕ್ಸ್​ಪ್ರೆಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 358 ಜನರು ಮೃಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

3- 1999 ಗೈಸಲ್ ರೈಲು ದುರಂತ

    ಅಸ್ಸಾಂ ರಾಜಧಾನಿ ಗುವಾಹಟಿಯಿಂದ 310 ಮೈಲಿ ದೂರದಲ್ಲಿರುವ ಗೈಸಲ್ ಬಳಿ 2,500 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು ಪರಿಣಾಮ 290 ಪ್ರಯಾಣಿಕರು ಮೃತಪಟ್ಟಿದ್ದರು. ಅತಿ ವೇಗದಲ್ಲಿ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ರೈಲುಗಳು ಸ್ಫೋಟಗೊಂಡಿದ್ದವು.

    4- 1998 ಖನ್ನಾ ರೈಲು ದುರಂತ

    ಪಂಜಾಬ್​ನ ಉತ್ತರ ರೈಲ್ವೆಯ ಖನ್ನಾ- ಲೂಧಿಯಾನ ವಿಭಾಗದ ಖನ್ನಾ ಬಳಿ ಅಮೃತಸರಕ್ಕೆ ತೆರಳುತ್ತಿದ್ದ ಗೋಲ್ಡನ್ ಟೆಂಪಲ್ ಮೇಲ್ ರೈಲು ಹಳಿ ತಪ್ಪಿ ಬಿದ್ದಿತ್ತು. ಈ ಬೋಗಿಗಳಿಗೆ ಕೋಲ್ಕತ್ತಾಗೆ ತೆರಳುತ್ತಿದ್ದ ಜಮ್ಮು ತಾವಿ- ಸೀಲ್ಡಾ ಎಕ್ಸ್​​ಪ್ರೆಸ್​ ರೈಲು ಡಿಕ್ಕಿ ಹೊಡೆದಿದೆ. 212 ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದರು. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

    5- 2002ರ ಹೌರಾ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ದುರಂತ

    2000 ಅವಧಿಯಲ್ಲಿ ಭಾರತದ ಅತಿ ವೇಗದ ರೈಲು ಎಂದು ಹೇಳಲಾಗಿದ್ದ ಹೌರಾ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲು ಗಯಾ ಮತ್ತು ದೆಹ್ರಿ-ಆನ್-ಸೋನೆ ನಿಲ್ದಾಣಗಳ ನಡುವಿನ ರಫಿಗಂಜ್ ಬಳಿ ಹಳಿ ತಪ್ಪಿತ್ತು. 130 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ರೈಲಿನ ಬೋಗಿಗಳು ಧವಿ ನದಿಗೆ ಬಿದ್ದಿದ್ದವು. ರಾತ್ರಿ 10.40 ಕ್ಕೆ ನಡೆದ ಘಟನೆಯಲ್ಲಿ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

    6- 2010 ಜ್ಞಾನೇಶ್ವರಿ ಎಕ್ಸ್ ಪ್ರೆಸ್ ದುರಂತ

    ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖೇಮಾಶುಲಿ ಮತ್ತು ಸರ್ದಿಹಾ ನಡುವಿನ ಪ್ರದೇಶದಲ್ಲಿ ಮುಂಬೈಗೆ ತೆರಳುತ್ತಿದ್ದ ಹೌರಾ ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಸೂಪರ್ ಡೀಲಕ್ಸ್ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿತ್ತು. ಘಟನೆಯಲ್ಲಿ ಕನಿಷ್ಠ 170 ಮಂದಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರಿಯಾಗಿತ್ತು.

    7- 2016 ಇಂದೋರ್ ಪಾಟ್ನಾ ದುರಂತ

    ಇಂದೋರ್-ಪಾಟ್ನಾ ಎಕ್ಸ್​​ಪ್ರೆಸ್​ 2016ರ ನವೆಂಬರ್ 20ರಂದು ಕಾನ್ಪುರದ ಪುಖ್ರಾಯನ್ ಬಳಿ ಹಳಿ ತಪ್ಪಿ ಉರುಳಿ ಬಿದ್ದಿತ್ತು. ಘಟನೆಯಲ್ಲಿ 150 ಜನರು ಸಾವನ್ನಪ್ಪಿದರು ಹಾಗೂ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    8- 2005 ವಾಲಿಗೊಂಡ ರೈಲು ದುರಂತ

    2005ರ ಅಕ್ಟೋಬರ್ 29ರಂದು ಆಂಧ್ರಪ್ರದೇಶದ ವಾಲಿಗೊಂಡದಲ್ಲಿ ಈ ಅವಘಡ ನಡೆದಿತ್ತು. ಏಕಾಏಕಿ ಸುರಿದ ಮಳೆಗೆ ಸಣ್ಣ ರೈಲು ಸೇತುವೆಯನ್ನು ಕೊಚ್ಚಿಕೊಂಡು ಹೋಗಿತ್ತು. ಅದರ ಮಾಹಿತಿ ಇಲ್ಲದೇ ಡೆಲ್ಟಾ ಫಾಸ್ಟ್ ಪ್ಯಾಸೆಂಜ್​ ರೈಲು ಆ ಹಳಿಯ ಮೇಲೆ ಬಂದು ಉರುಳಿ ಬಿದ್ದಿತ್ತು. ಘಟನೆಯಲ್ಲಿ 114 ಜನರು ಮೃತಪಟ್ಟಿದ್ದರು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    ಇದನ್ನೂ ಓದಿ : Odisha Train Accident: ಒಡಿಶಾದಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಅಪಘಾತ; 50ಕ್ಕೂ ಹೆಚ್ಚು ಜನರ ಸಾವು

    9- 2010 ಸೈಂಥಿಯಾ ರೈಲು ಅಪಘಾತ

    ಜುಲೈ 19, 2010ರಂದು ಪಶ್ಚಿಮ ಬಂಗಾಳದ ಸೈಂಥಿಯಾದಲ್ಲಿ ಉತ್ತರ ಬಂಗಾ ಎಕ್ಸ್​ಪ್ರೆಸ್​ ಮತ್ತು ವನಂಚಲ್ ಎಕ್ಸ್​ಪ್ರೆಸ್​ ಪರಸ್ಪರ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸುಮಾರು 63 ಜನರು ಮೃತಪಟ್ಟಿದ್ದರು. 165 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    10- 2012 ಹಂಪಿ ಎಕ್ಸ್ ಪ್ರೆಸ್ ಅಪಘಾತ

    2012ರ ಮೇ 22ರಂದು ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸ್​ಪ್ರೆಸ್​ ರೈಲು ಆಂಧ್ರಪ್ರದೇಶದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು. ಅವುಗಳಲ್ಲಿ ಒಂದು ಬೆಂಕಿಗೆ ಆಹುತಿಯಾಗಿತ್ತು. ಘಟನೆಯಲ್ಲಿ 25 ಪ್ರಯಾಣಿಕರು ಮೃತಪಟ್ಟಿದ್ದು ಸುಮಾರು 43 ಜನರು ಗಾಯಗೊಂಡಿದ್ದರು.

    ಭಾರತದಲ್ಲಿ ಇನ್ನೂ ಹಲವಾರು ರೈಲು ಅವಘಡಗಳು ಸಂಭವಿಸಿವೆ. ಆದರೆ, ಸಾವು ನೋವುಗಳ ವಿಚಾರಕ್ಕೆ ಬಂದಾಗ ಈ ಮೇಲಿನ ಅಪಘಾತಗಳಲ್ಲಿ ಹೆಚ್ಚಿನ ಸಾವು, ನೋವುಗಳು ಸಂಭವಿಸಿವೆ. ಹೀಗಾಗಿ ಇವುಗಳನ್ನು ಅತ್ಯಂತ ಭೀಕರ ದುರಂತ ಎಂದು ಹೇಳಲಾಗುತ್ತದೆ.

    Exit mobile version