Site icon Vistara News

Amritpal Singh: ನೇಪಾಳಕ್ಕೆ ಕಾಲಿಟ್ಟಿಲ್ಲ ಖಲಿಸ್ತಾನಿ ಉಗ್ರ ಅಮೃತ್​ಪಾಲ್​ ಸಿಂಗ್​; ಆದರೂ ಅಲ್ಲಿ ಹೈಅಲರ್ಟ್​!

Amritpal Singh

ಪಂಜಾಬ್​​ನಿಂದ ಪರಾರಿಯಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್​ (Amritpal Singh) ನೇಪಾಳಕ್ಕೆ ಕಾಲಿಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆತ ನೇಪಾಳವನ್ನು ಪ್ರವೇಶಿಸಿದ್ದೇ ಆದಲ್ಲಿ, ಅಲ್ಲಿಂದ ಮತ್ತೊಂದು ರಾಷ್ಟ್ರಕ್ಕೆ ಪರಾರಿಯಾಗದಂತೆ ತಡೆಯಿರಿ ಎಂದು ಭಾರತ ಸರ್ಕಾರ ನೇಪಾಳಕ್ಕೆ ಹೇಳಿತ್ತು. ಆದರೆ ಸದ್ಯದವರೆಗೆ ಅಮೃತ್​ಪಾಲ್​ ಸಿಂಗ್ ನೇಪಾಳಕ್ಕೆ ಪ್ರವೇಶ ಮಾಡಿರುವ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಆದರೂ ಆತನ ಪ್ರವೇಶದ ಸಾಧ್ಯತೆ ಬಗ್ಗೆ ಭಾರತ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ನಮ್ಮ ಪೊಲೀಸರು ಹೈಅಲರ್ಟ್ ಆಗಿದ್ದಾರೆ ಎಂದು ಪೋಖರೇಲ್​ನ ಪೊಲೀಸ್​ ಆಯುಕ್ತ ಪೋಶರಾಜ್​ ಪೋಖ್ರಾಜ್​ ತಿಳಿಸಿದ್ದಾರೆ. ನೇಪಾಳಕ್ಕೆ ಅಮೃತ್​ಪಾಲ್​ ಸಿಂಗ್​ ಪ್ರವೇಶ ಮಾಡಿದ್ದಾನೆ, ಆತನನ್ನು ಹಿಡಿಯಲು ಭಾರತದಿಂದಲೂ ರಕ್ಷಣಾ ಸಿಬ್ಬಂದಿ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅದು ಸುಳ್ಳು. ಭಾರತದಿಂದ ಯಾರೂ ಬಂದಿಲ್ಲ. ನಾವಿಲ್ಲಿ ಅಲ್ರ್ಟ್ ಆಗಿದ್ದೇವೆ ಎಂದಿದ್ದಾರೆ.

ಖಲಿಸ್ತಾನಿ ಉಗ್ರ ಅಮೃತ್​ಪಾಲ್​ ಸಿಂಗ್​ ಮಾರ್ಚ್​ 18ರಿಂದಲೂ ನಾಪತ್ತೆಯಾಗಿದ್ದಾನೆ. ಆತನನ್ನು ಪಂಜಾಬ್​​ನ ನಾಕೋಡರ್​​ ಬಳಿ ಪೊಲೀಸರು ಬಂಧಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಿದ್ದಾನೆ. ಅಂದಿನಿಂದಲೂ ಅವನ ಪತ್ತೆಗೆ ಬಲೆ ಬೀಸಲಾಗಿದೆ. ಆದರೆ ಅಮೃತ್​ಪಾಲ್​ ಸಿಂಗ್ ಕೈಗೆಟಕುತ್ತಿಲ್ಲ. ಈ ಮಧ್ಯೆ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್​ ಈಗ ಯುಕೆಗೆ ಹೋಗುವ ಪ್ರಯತ್ನದಲ್ಲಿದ್ದಾನೆ. ಯುನೈಟೆಡ್​ ಕಿಂಗ್​ಡಮ್​​ಗೆ ತೆರಳಿ, ಅಲ್ಲಿನ ಪೌರತ್ವ ಪಡೆದು ಭಾರತದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಆತ ಹುನ್ನಾರ ನಡೆಸುತ್ತಿದ್ದಾನೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಅಮೃತ್​ಪಾಲ್​ ಸಿಂಗ್​​ನನ್ನು ರಾತ್ರಿ ಮನೆಯಲ್ಲಿಟ್ಟುಕೊಂಡಿದ್ದ ಮಹಿಳೆ ಅರೆಸ್ಟ್​; ಯುಕೆ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿರುವ ಖಲಿಸ್ತಾನಿ ನಾಯಕ

ಆತ ಫೆಬ್ರವರಿಯಲ್ಲೇ ಬ್ರಿಟಿಷ್​ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದೂ ಹೇಳಲಾಗಿದೆ. ಈತ ಫೆಬ್ರವರಿಯಲ್ಲಿ ಕಿರೆಣ್​ ಕೌರ್​ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕಿರೆಣ್​ ಯುಕೆ ನಾಗರಿಕಳಾಗಿದ್ದು, ಅದರ ಆಧಾರದ ಮೇಲೆಯೇ ಪಾಲ್​ ಕೂಡ ಅಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಮೃತ್​ಪಾಲ್​ ಅರ್ಜಿ ವಿಚಾರದಲ್ಲಿ ಬ್ರಿಟಿಷ್​ ಸರ್ಕಾರ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

Exit mobile version