ನವ ದೆಹಲಿ: ಗುರುವಾರದಿಂದ ಆರಂಭಗೊಂಡಿರುವ ಕಾಂವಡ್ ಯಾತ್ರೆಗೆ (Kanwar yatra) ಮೂಲಭೂತವಾದಿ ಶಕ್ತಿಗಳ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಈ ಸೂಚನೆ ನೀಡಲಾಗಿದ್ದು, ಕಾಂವಡ್ ಯಾತ್ರೆ ವೇಳೆ ಎಲ್ಲ ಕಡೆಯೂ ಭದ್ರತಾ ವ್ಯವಸ್ಥೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಕಾಂವಡ್ ಯಾತ್ರಿಕರು ಹೆಚ್ಚಾಗಿ ರೈಲುಗಳಲ್ಲಿ ಪ್ರಯಾಣ ಮಾಡುವುದರಿಂದ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಗೃಹ ಇಲಾಖೆ ಸೂಚಿಸಿದೆ. ರೈಲ್ವೆ ಇಲಾಖೆ ಕೂಡಾ ಗೃಹ ಇಲಾಖೆಯ ಸೂಚನೆಯನ್ನು ಪಾಲಿಸಲು ಮುಂದಾಗಿದೆ.
ಏನಿದು ಕಾಂವಡ್ ಯಾತ್ರೆ?
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆಚರಣೆಯಲ್ಲಿರುವ ತೀರ್ಥ ಯಾತ್ರೆ ಇದು. ಶ್ರಾವಣ ಮಾಸದ ಮೊದಲ ದಿನದಿಂದ ಆರಂಭಗೊಂಡು ೧೩ ದಿನಗಳ ಕಾಲ ನಡೆಯುವ ಯಾತ್ರೆ. ಭಕ್ತರು ಗಂಗಾ ತಟದ ಪವಿತ್ರ ಸ್ಥಳಗಳಿಗೆ ತಲುಪಿ ಅಲ್ಲಿಂದ ತೀರ್ಥವನ್ನು ಹೊತ್ತುಕೊಂಡು ಶಿವ ದೇಗುಲಗಳಿಗೆ ಹೋಗಿ ಶಿವಲಿಂಗಕ್ಕೆ ತೀರ್ಥಸ್ನಾನ ಮಾಡಿಸುವ ಆಚರಣೆ ಇದು. ಸಾಮಾನ್ಯವಾಗಿ ಹರಿದ್ವಾರ, ಗೋಮುಖ, ಉತ್ತರಾಖಂಡದ ಗಂಗೋತ್ರಿ ಮತ್ತು ಬಿಹಾರದ ಸುಲ್ತಾನ್ ಗಂಜ್‌ನಿಂದ ಗಂಗಾ ತೀರ್ಥವನ್ನು ತರಲಾಗುತ್ತದೆ. ಅಂದರೆ, ಇಲ್ಲಿಗೆ ದೇಶದ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಇಲ್ಲಿಂದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಕೆಲವು ಮತ್ತು ಇತರ ದೊಡ್ಡ ಶಿವ ದೇಗುಲದವರೆಗೆ ಸಾಗಿ ಅರ್ಚನೆ ನಡೆಯುತ್ತದೆ. ಈ ಬಾರಿ ಜುಲೈ ೧೪ರಿಂದ ಆರಂಭಗೊಂಡ ಕಾಂವಡ್ ಯಾತ್ರೆ ಜುಲೈ ೨೬ರವರೆಗೆ ನಡೆಯಲಿದೆ.
ಎರಡು ವರ್ಷಗಳ ಬಳಿಕ ಸಂಭ್ರಮ
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಾಂವಡ್ ಯಾತ್ರೆ ನಡೆದಿಲ್ಲ. ಹೀಗಾಗಿ ಈ ಬಾರಿಯ ಯಾತ್ರೆಗೆ ಹೆಚ್ಚು ಮಹತ್ವ ಬಂದಿದೆ. ಭಾರಿ ಸಂಖ್ಯೆಯಲ್ಲಿ ಜನರು ಗಂಗಾ ನದಿಯ ಕಡೆಗೆ ಹೊರಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಹರಿದ್ವಾರ ಮತ್ತು ರಿಷಿಕೇಶಕ್ಕೆ ಹೆಚ್ಚು ಜನರ ಆಗಮನವಾಗುತ್ತಿದೆ. ಇಲ್ಲಿಗೆ ಉತ್ತರ ಪ್ರದೇಶ ಮಾತ್ರವಲ್ಲದೆ, ಹರಿಯಾಣ, ದಿಲ್ಲಿ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇಲ್ಲಿಂದ ತೀರ್ಥ ತೆಗೆದುಕೊಂಡು ಹೋಗಿ ತಮ್ಮ ಭಾಗದ ಶಿವ ದೇವಸ್ಥಾನಗಳಲ್ಲಿ ಅಭಿಷೇಕ ಮಾಡುತ್ತಾರೆ.
ಏನೇನು ಭದ್ರತಾ ವ್ಯವಸ್ಥೆ?
ಭಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಹರಿದ್ವಾರ ಮತ್ತು ರಿಷಿಕೇಶದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಸಜ್ಜುಗೊಳಿಸಲಾಗಿದೆ. ಡ್ರೋನ್‌ಗಳು ಕಣ್ಗಾವಲಿಟ್ಟಿವೆ. ಬಾಂಬ್ ನಿಷ್ಕ್ರಿಯ ದಳಗಳು, ಉಗ್ರ ನಿಗ್ರಹ ದಳಗಳನ್ನು ಕೂಡಾ ಸಜ್ಜುಗೊಳಿಸಲಾಗಿದೆ. ಕಾಂವಡ್ ಯಾತ್ರೆ ಮತ್ತು ತೀರ್ಥ ತೆಗೆದುಕೊಂಡು ಹೋಗುವ ಪ್ರಕ್ರಿಯೆ ದಿನವಿಡೀ ನಡೆಯುವುದರಿಂದ ರಾತ್ರಿ-ಹಗಲು ಭದ್ರತಾ ವ್ಯವಸ್ಥೆ ಮಾಡಲಾಗಿದೆ.