Site icon Vistara News

Hijab Row | ಹಿಜಾಬ್‌ ನಿಷೇಧ ಪ್ರಶ್ನಿಸಿದ ಅರ್ಜಿ ವಿಚಾರಣೆ ಆರಂಭ, ಸೆ.7ಕ್ಕೆ ಮುಂದೂಡಿದ ಸುಪ್ರೀಂ

Hijab

ನವದೆಹಲಿ: ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್‌ ವಿವಾದದ (Hijab Row) ಕುರಿತು ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌, ಸೆಪ್ಟೆಂಬರ್‌ 7ಕ್ಕೆ ವಿಚಾರಣೆ ಮುಂದೂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ರಾಜ್ಯ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಬುಧವಾರಕ್ಕೆ ವಿಚಾರಣೆ ಮುಂದೂಡಿದೆ.

ಹಿಜಾಬ್‌ಗೆ ಅನುಮತಿ ನೀಡಬೇಕು ಎಂದು ಸಲ್ಲಿಸಿದ ಅರ್ಜಿದಾರರ ಪರ ದೇವದತ್‌ ಕಾಮತ್‌ ವಾದ ಮಂಡಿಸಿದರೆ, ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಸಹ ವಾದ ಮಂಡಿಸಿದರು. ಇಡೀ ದಿನ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರು ಮಂಡಿಸಿದ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆ ಮುಂದೂಡಲಾಯಿತು.

ವರ್ಷದ ಆರಂಭದಲ್ಲಿ ಉಂಟಾದ ಹಿಜಾಬ್‌ ವಿವಾದವು ದೇಶಾದ್ಯಂತ ಸುದ್ದಿ ಮಾಡಿತ್ತು. ಉಡುಪಿಯ ಸರ್ಕಾರಿ ಪಿಯು ಕಾಲೇಜ್‌ಗೆ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಆಗಮಿಸಿದ್ದು ಹಾಗೂ ಹಿಜಾಬ್‌ ಧರಿಸಿಯೇ ಬರುವುದಾಗಿ ಪಟ್ಟು ಹಿಡಿದ ಕಾರಣ ವಿವಾದವು ಭುಗಿಲೆದ್ದಿತ್ತು. ಬಳಿಕ ಮಾರ್ಚ್‌ 15ರಂದು ಕರ್ನಾಟಕ ಹೈಕೋರ್ಟ್‌, ರಾಜ್ಯ ಸರ್ಕಾರದ ತೀರ್ಪನ್ನು ಎತ್ತಿಹಿಡಿದ ಬಳಿಕ ವಿವಾದ ಸ್ವಲ್ಪ ತಣ್ಣಗಾಗಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಆಗಸ್ಟ್‌ 29ರಂದು ಮೊದಲ ಬಾರಿಗೆ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್‌, ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿ, ಸೆಪ್ಟೆಂಬರ್‌ 5ಕ್ಕೆ ವಿಚಾರಣೆ ಮುಂದೂಡಿತ್ತು.

ಇದನ್ನೂ ಓದಿ | ಹಿಜಾಬ್‌ ವಿವಾದ: ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ, ಅರ್ಜಿದಾರರಿಗೆ ತೀವ್ರ ತರಾಟೆ

Exit mobile version