ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ (Hijab Row) ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ದಿನೇದಿನೆ ಕುತೂಹಲಕಾರಿ ಆಗುತ್ತಿದೆ. ಏಳನೇ ದಿನವಾದ ಸೋಮವಾರ ನಡೆದ ವಿಚಾರಣೆಯು ಹಲವು ಅಂಶಗಳ ಪ್ರಸ್ತಾಪಕ್ಕೆ ಸಾಕ್ಷಿಯಾಯಿತು. ನರೇಂದ್ರ ಮೋದಿ ಪೇಟ, ಜೀನ್ಸ್ ಪ್ಯಾಂಟ್, ಜವಾಹರ ಲಾಲ್ ನೆಹರು ಸೇರಿ ಹಲವು ವಿಷಯ ಪ್ರಸ್ತಾಪವಾದವು. ಮಂಗಳವಾರಕ್ಕೆ ವಿಚಾರಣೆ ಮುಂದೂಡುವ ಮುನ್ನ ಪ್ರಸ್ತಾಪವಾದ ವಿಷಯಗಳು, ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಹಾಗೂ ನ್ಯಾಯಮೂರ್ತಿಗಳ ನಡುವೆ ನಡೆದ ಸಂಭಾಷಣೆಯ ಸಂಕ್ಷಿಪ್ತ ವಿವರ ಇಲ್ಲಿದೆ.
ಪ್ರಧಾನಿ ಮೋದಿಯ ಉಲ್ಲೇಖ
ವಕೀಲ ದುಷ್ಯಂತ್ ದವೆ: ಪ್ರಧಾನಿಯವರು ಸ್ವಾತಂತ್ರ್ಯ ದಿನಾಚರಣೆಯಂದು ವಿಶಿಷ್ಟ ಪೇಟ ಧರಿಸುತ್ತಾರೆ. ಇದು ಭಾರತದ ವೈವಿಧ್ಯತೆಯ ಸಂಕೇತ.
ಆದರೆ, ಗಾಲ್ಫ್ ಕೋರ್ಸ್‌ಗಳಲ್ಲಿ ಜೀನ್ಸ್ ಧರಿಸಿ ಹೋದರೆ ಅಲ್ಲಿ ಪ್ರವೇಶಿಸಲು ಅನುಮತಿ ಇರುವುದಿಲ್ಲ
ನ್ಯಾ.ಹೇಮಂತ್ ಗುಪ್ತಾ: ಅದು ಗೊತ್ತು, ಅಲ್ಲೆಲ್ಲ ನಿಯಮಗಳು ಇರುತ್ತವೆ.
ದವೆ: ಆದರೆ, ಶಾಲೆಯಲ್ಲಿ ಹೀಗೆ ನಿಯಮ ರೂಪಿಸಬಹುದೇ? ನಾನಾದರೆ ಬೇಡ ಎನ್ನುತ್ತೇನೆ.
ನ್ಯಾ.ಗುಪ್ತಾ: ಹೌದು, ನಾವು ಇದರ ಬಗ್ಗೆಯೇ ಏಳು ದಿನದಿಂದ ವಿಚಾರಣೆ ನಡೆಸುತ್ತಿದ್ದೇವೆ…
ಅಂಬೇಡ್ಕರ್ ಭಾಷಣದ ಪ್ರಸ್ತಾಪ
ದವೆ: “ಧರ್ಮದಲ್ಲಿ ಭಕ್ತಿ ಇದ್ದರೆ ಅದು ಆತ್ಮ ಮೋಕ್ಷದ ಹಾದಿಯಾಗಿರುತ್ತದೆ. ಆದರೆ, ಅದೇ ರಾಜಕೀಯದಲ್ಲಿ ಯಾರ ಮೇಲಾದರೂ ಭಕ್ತಿ ಇದ್ದರೆ, ಅದು ನಿರಂಕುಶ ಪ್ರಭುತ್ವಕ್ಕೆ ದೂಡುತ್ತದೆ” ಎಂದು ಅಂಬೇಡ್ಕರ್ ಹೇಳಿದ್ದರು.
ಅಂಬೇಡ್ಕರ್ ಅವರು ನೆಹರು ವಿರುದ್ಧ ಟೀಕಿಸುವಾಗ ಹೀಗೆ ಹೇಳಿದರು ಎನಿಸುತ್ತದೆ.
ನ್ಯಾ.ಸುಧಾಂಶು ಧುಲಿಯಾ: ಅಲ್ಲ, ನೆಹರು ವಿರುದ್ಧ ಅಲ್ಲ, ಹಿಂದೂ ಕೋಡ್ ಬಿಲ್ ವೇಳೆ ಹಾಗೆ ಹೇಳಿರಬಹುದು. ಅಂಬೇಡ್ಕರ್ ಅವರನ್ನು ನೆಹರು ಕಾನೂನು ಮಂತ್ರಿಯನ್ನಾಗಿ ಮಾಡಿದರು.
ಶಿರೂರು ಮಠದ ಕೇಸ್ ಉಲ್ಲೇಖ
ದಾವೆ: ಶಿರೂರು ಮಠದ ಕೇಸ್‌ನಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ನ್ಯಾಯಾಲಯವು ಯಾವುದೇ ನಿಯಮ ರೂಪಿಸಿಲ್ಲ.
ನ್ಯಾ.ಧುಲಿಯಾ: ಅಗತ್ಯ ಆಚರಣೆಗಳಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರು ಮಂಡಿಸಿದ ವಾದವನ್ನು ಶಿರೂರು ಮಠ ತೀರ್ಪು ತಿರಸ್ಕರಿಸಿತ್ತು.
ಇದನ್ನೂ ಓದಿ | ವಿಸ್ತಾರ Explainer | ಇರಾನ್‌ನಲ್ಲಿ ಹಿಜಾಬ್ ಕಟ್ಟಳೆ, ಹೊರಬರಲು ಆಗುವುದಿಲ್ಲವೇ ಮಹಿಳೆ?