Site icon Vistara News

Tripura Hijab Row: ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು ಶಾಲೆ ಪ್ರವೇಶಿಸಲು ನಕಾರ; ಭುಗಿಲೆದ್ದ ವಿವಾದ

Tripura Hijab Row

Hijab Row: Tripura Girls In Hijab Stopped Outside School, Boy Thrashed For Protesting

ಅಗರ್ತಲಾ: ಕರ್ನಾಟದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿದ ಬಳಿಕ ಉಂಟಾದ ವಿವಾದವು ದೇಶಾದ್ಯಂತ ಸುದ್ದಿಯಾಗಿ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ, ತ್ರಿಪುರದಲ್ಲಿ ಕೂಡ ಹಿಜಾಬ್‌ ವಿವಾದ (Tripura Hijab Row) ಭುಗಿಲೆದ್ದಿದೆ. ಹಿಜಾಬ್‌ ಧರಿಸಿ ಶಾಲೆ ಪ್ರವೇಶಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಲಬಂಥೀಯ ಗುಂಪೊಂದು ತಡೆದಿದೆ. ಇದು ಈಗ ವಿವಾದಕ್ಕೆ ಕಾರಣಗಾಗಿದೆ.

ಸೆಪಹಿಜಾಲ ಜಿಲ್ಲೆ ವಿಶಾಲ್‌ಘರ್‌ ವಿಭಾಗದ ಶಾಲೆಯೊಂದರ ಹೊರಗಡೆ ಗಲಾಟೆ ನಡೆದಿದೆ. ಶುಕ್ರವಾರ (ಜುಲೈ 4) ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲೆ ಪ್ರವೇಶಿಸಲು ಮುಂದಾಗಿದ್ದಾರೆ. ಇದೇ ವೇಳೆ ಗುಂಪೊಂದು ಅವರನ್ನು ತಡೆದಿದ್ದು, ಹಿಜಾಬ್‌ ಬಿಚ್ಚಿಟ್ಟು ಶಾಲೆಗೆ ತೆರಳಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಬಲಪಂಥೀಯ ಗುಂಪಿನ ಸದಸ್ಯರ ಕೃತ್ಯವನ್ನು ಖಂಡಿಸಿದ್ದಾನೆ. ಆಗ ಭಾರಿ ಗಲಾಟೆ ಶುರುವಾಗಿದೆ.

ಬಲಪಂಥೀಯ ಗುಂಪಿನ ಕೃತ್ಯ ಖಂಡಿಸಿದ 10ನೇ ತರಗತಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಯನ್ನು ಶಾಲೆಯ ಹೊರಗಿನಿಂದ ಹೊರಗೆ ಕರೆದುಕೊಂಡು ಬಂದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಲಪಂಥೀಯ ಸಂಘಟನೆ ವಿರುದ್ಧ ರಸ್ತೆ ತಡೆ ನಡೆಸಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.

ಇದನ್ನೂ ಓದಿ: Sara Khadem: ಹಿಜಾಬ್​ ಧರಿಸದೆ ಚೆಸ್​ ಆಡಿದ್ದ ಇರಾನ್​ ಆಟಗಾರ್ತಿಗೆ ಸ್ಪೇನ್​ ದೇಶದ ಪೌರತ್ವ

ಅಷ್ಟಕ್ಕೂ ಆಗಿದ್ದೇನು?

ವಿಶ್ವ ಹಿಂದು ಪರಿಷತ್‌ ಸೇರಿ ಹಲವು ಹಿಂದು ಸಂಘಟನೆಗಳ ಕಾರ್ಯಕರ್ತರು ಕರೈಮುರ ಶಾಲೆಯ ಹೆಡ್‌ ಮಾಸ್ಟರ್‌ ಆದ ಪ್ರಿಯತೋಷ್‌ ನಂದಿ ಅವರನ್ನು ಭೇಟಿಯಾಗಿದ್ದಾರೆ. ಶಾಲೆಯಲ್ಲಿ ಹಿಜಾಬ್‌ ನಿಷೇಧಿಸಬೇಕು ಎಂದು ಸೂಚಿಸಿದ್ದಾರೆ. ಆದರೆ, ಹಿಜಾಬ್‌ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ಆದೇಶವಿಲ್ಲ. ಇದರಿಂದಾಗಿ ಅವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲೆಗೆ ಆಗಮಿಸದಂತೆ ಮೌಖಿಕವಾಗಿ ಸೂಚಿಸಿದ್ದಾರೆ. ಆದರೂ ಒಂದಷ್ಟು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದ ಕಾರಣ ಬಲಬಂಥೀಯ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಇದಾದ ಬಳಿಕ ಗಲಾಟೆ ಶುರುವಾಗಿದೆ.

Exit mobile version