ಹೈದರಾಬಾದ್: ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು (Hijab Row) ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶದ ಕುರಿತು ಸುಪ್ರೀಂ ಕೋರ್ಟ್ ಭಿನ್ನ ನಿಲುವು ವ್ಯಕ್ತಪಡಿಸಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಇದನ್ನು ಮುಸ್ಲಿಂ ಅರ್ಜಿದಾರರು ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ, “ದೇಶದಲ್ಲಿ ಒಂದಲ್ಲ ಒಂದು ದಿನ ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆಯು ಪ್ರಧಾನಿಯಾಗಲಿದ್ದಾರೆ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೊಂಡಿದ್ದಾರೆ.
“ನಾನು ಇದುವರೆಗೆ ಹಲವು ಬಾರಿ ಹೇಳಿದ್ದೇನೆ. ಈಗಲೂ ಇದನ್ನೇ ಹೇಳುತ್ತೇನೆ. ನನ್ನ ಜೀವಿತಾವಧಿಯಲ್ಲಿ ಆಗಲಿಕ್ಕಿಲ್ಲ. ಆದರೆ, ಒಂದಲ್ಲ ಒಂದು ದಿನ ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆಯೇ ಪ್ರಧಾನಿ ಆಗಲಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ” ಎಂದು ಹೇಳಿದ್ದಾರೆ.
“ಒಬ್ಬ ಹಿಂದೂ, ಸಿಖ್ ಹಾಗೂ ಕ್ರಿಶ್ಚಿಯನ್ ವಿದ್ಯಾರ್ಥಿಯು ಧಾರ್ಮಿಕ ಸಂಕೇತಗಳನ್ನು ಧರಿಸಿ ತರಗತಿ ಪ್ರವೇಶಿಸುತ್ತಿರಬೇಕಾದರೆ, ಮುಸ್ಲಿಂ ವಿದ್ಯಾರ್ಥಿನಿಯನ್ನು ಏಕೆ ತಡೆಯಲಾಗುತ್ತಿದೆ? ಪ್ರತಿಯೊಬ್ಬರಿಗೂ ಅವರ ಇಷ್ಟದ ಬಟ್ಟೆ ಧರಿಸುವ ಸ್ವಾತಂತ್ರ್ಯವಿದೆ. ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ | Hijab Row | ಹಿಜಾಬ್ ಕುರಿತು ಭಿನ್ನ ತೀರ್ಪು ಆಯ್ತು, ಮುಂದೇನಾಗಲಿದೆ? ಹೇಗಿರಲಿದೆ ಪ್ರಕ್ರಿಯೆ?