Site icon Vistara News

ಉತ್ತರಾಖಂಡ ಸೇರಿದ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಬಂಡಾಯ ಶಾಸಕರು; ಸರ್ಕಾರ ಪತನ?

Sukhvinder Singh Sukhu

Himachal Crisis: 11 MLAs, including six Congress rebels, reach BJP-ruled Uttarakhand

ಡೆಹ್ರಾಡೂನ್/ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಕಾಂಗ್ರೆಸ್‌ನ 6 ಬಂಡಾಯ ಶಾಸಕರು ಸೇರಿ 11 ಶಾಸಕರು ಬಿಜೆಪಿ ಆಡಳಿತದ ಉತ್ತರಾಖಂಡ ಸೇರಿದ್ದಾರೆ. ಉತ್ತರಾಖಂಡದ (Uttarakhand) ರಿಷಿಕೇಶದಲ್ಲಿರುವ ತಾಜ್‌ ಹೋಟೆಲ್‌ಗೆ (Taj Hotel) 11 ಶಾಸಕರು ಆಗಮಿಸಿದ್ದು, ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಹಾಗಾಗಿ, ಹಿಮಾಚಲ ಪ್ರದೇಶದಲ್ಲಿರುವ ಸುಖ್ವಿಂದರ್‌ ಸಿಂಗ್‌ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರ (Himachal Pradesh Government) ಪತನಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಚುನಾವಣೆ ಬಳಿಕ ಸುಖ್ವಿಂದರ್‌ ಸಿಂಗ್‌ ಸುಖು ಅವರು ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಹೈಕಮಾಂಡ್‌ ಬುಲಾವ್‌ ಮೇರೆಗೆ ಸುಖ್ವಿಂದರ್‌ ಸಿಂಗ್‌ ಸುಖು ಅವರು ದೆಹಲಿಗೆ ತೆರಳಿದ್ದು, ಕಾಂಗ್ರೆಸ್‌ ಹಿರಿಯ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಸುಖ್ವಿಂದರ್‌ ಸಿಂಗ್‌ ಸುಖು ಅವರು ದೆಹಲಿಯಲ್ಲಿರುವಾಗಲೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯು ಸಂಚಲನ ಮೂಡಿಸಿದೆ. ಹಾಗಾಗಿ, ಈ ಬಾರಿ ಹಿಮಾಚಲ ಪ್ರದೇಶ ಸರ್ಕಾರ ಪತನವಾಗುವುದು ಖಚಿತ ಎನ್ನಲಾಗುತ್ತಿದೆ.

ರಾಜ್ಯಸಭೆ ಚುನಾವಣೆ ಬಳಿಕ ಭಿನ್ನಮತ ಭುಗಿಲು

ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ಬಳಿಕ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನದ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಒಂದು ಕಾಲು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರ ಪತನದ ಭೀತಿ ಎದುರಿಸಲು ಇದೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: Himachal Politics: ಅಡ್ಡ ಮತದಾನ ಮಾಡಿದ ಹಿಮಾಚಲ ಪ್ರದೇಶದ 6 ಕಾಂಗ್ರೆಸ್ ಶಾಸಕರು ಅನರ್ಹ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಗೆಲ್ಲಿಸಲಾಗದೆ ಮುಖಭಂಗಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಅಡ್ಡ ಮತದಾನದ ಏಟಿನಿಂದ ಚೇತರಿಸಿಕೊಂಡಿಲ್ಲ. ಅದರ ನಡುವೆ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಮಗ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ನಂತರ ಅವರು ಯುಟರ್ನ್‌ ಹೊಡೆದಿದ್ದು, ಭಿನ್ನಮತ ತುಸು ತಣ್ಣಗಾಗಿತ್ತು. ಆದರೀಗ, ಕಾಂಗ್ರೆಸ್‌ನ 6 ಶಾಸಕರು, ಮೂವರು ಪಕ್ಷೇತರರು ಉತ್ತರಾಖಂಡ ಸೇರಿರುವುದು ಮತ್ತೆ ಚರ್ಚೆ ಶುರುವಾಗಲು ಕಾರಣವಾಗಿದೆ.

68 ಸದಸ್ಯರ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಬಹುಮತವನ್ನೇ ಹೊಂದಿತ್ತು. ಅದರ ನಡುವೆ ಬಂದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಭಿನ್ನಮತವನ್ನು ಬಯಲಿಗೆ ತಂದಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 40, ಬಿಜೆಪಿ 25 ಹಾಗೂ ಮೂವರು ಪಕ್ಷೇತರ ಶಾಸಕರಿದ್ದಾರೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version