ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಎಲೆಕ್ಷನ್ ರಿಸಲ್ಟ್ ಒಂದು ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಹಿಂದಿಕ್ಕಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಿರುವ ಮಾಹಿತಿಗಳ ಪ್ರಕಾರ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ, ಬಿಜೆಪಿ 28 ಹಾಗೂ ಪಕ್ಷೇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚಿಸಲು 35 ಕ್ಷೇತ್ರಗಳನ್ನು ಗೆಲ್ಲಬೇಕು. ಸದ್ಯಕ್ಕೆ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದೆ (Himachal Election Result 2022).
ಈಗಿರುವ ರಿಸಲ್ಟ್ ಕಾಯಂಗೊಂಡರೆ ಕಾಂಗ್ರೆಸ್ ಅಧಿಕಾರಕ್ಕೇರುವುದು ಪಕ್ಕಾ. ಆದರೆ, ತೀರಾ ಸರಳ ಬಹುಮತವನ್ನು ಪಡೆದುಕೊಂಡ ಕಾಂಗ್ರೆಸ್ ಸರ್ಕಾರ ದೀರ್ಘ ಅವಧಿಗೆ ಬಾಳಿಕೆ ಬರುವುದೇ ಎಂಬ ಪ್ರಶ್ನೆ ಉದ್ಭವಾಗುತ್ತಿದೆ. ಈ ಹಿಂದಿನ ಮಧ್ಯಪ್ರದೇಶ, ಗೋವಾ, ಮಣಿಪುರ ವಿಧಾನಸಭೆ ಚುನಾವಣೆ ಫಲಿತಾಂಶಗಳು, ಆ ನಂತರ ನಡೆದ ರಾಜಕೀಯ ಬೆಳವಣಿಗೆಗಳು, ಬಿಜಿಪಿ ಉರುಳಿಸಿದ ರಾಜಕೀಯ ದಾಳಗಳಿಂದಾಗಿ ಅಧಿಕಾರ ಹೊಸ್ತಿಲಿನಲ್ಲಿ ಕಾಂಗ್ರೆಸ್ ಅಧಿಕಾರ ವಂಚಿತವಾಗಿರುವುದನ್ನು ಕಂಡಿದ್ದೇವೆ. ಅಂಥದ್ದೇ ಬೆಳವಣಿಗೆ ಹಿಮಾಚಲ ಪ್ರದೇಶದಲ್ಲಿ ನಡೆಯುವುದಿಲ್ಲ ಎನ್ನಲಾಗದು.
ಈಗಿರುವ ಅಂಕಿ ಸಂಖ್ಯೆಗಳ ಪ್ರಕಾರ, ಕಾಂಗ್ರೆಸ್ 37 ಮತ್ತು ಬಿಜಪಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾದಂತಿದೆ. ಹೀಗಾದರೆ, ಕಾಂಗ್ರೆಸ್ ಸರ್ಕಾರ ರಚಿಸಬಹುದು. ಆದರೆ, ಸರಳ ಬಹುಮತ ಅಂಚಿನಲ್ಲಿರುವುದರಿಂದ ಬಿಜೆಪಿ ತನ್ನ ರಾಜಕೀಯ ಚಾಣಾಕ್ಷತನವನ್ನು ಬಳಸಿಕೊಂಡು, ಸರ್ಕಾರ ರಚಿಸಿದರೂ ಅಚ್ಚರಿ ಪಡಬೇಕಿಲ್ಲ. ಗೆಲ್ಲಲಿರುವ ಮೂವರು ಪಕ್ಷೇತರರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಎಂಬುದನ್ನು ಗಮನಾರ್ಹ. ಹಾಗಾಗಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರ ಸರ್ಕಾರವನ್ನು ನೀಡಬೇಕಿದ್ದರೆ ಕನಿಷ್ಠ 40 ಸ್ಥಾನಗಳ್ನು ಮೀರಬೇಕು. ಆದರೆ, ಈಗಿರುವ ಟ್ರೆಂಟ್ ಪ್ರಕಾರ ಅದು ಅಸಾಧ್ಯ. ಹಾಗಾಗಿ, ಗೆದ್ದರೂ ಒಂದು ರೀತಿಯ ಅಳುಕಿನ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ವಿಶ್ಲೇಷಿಸಬಹುದು.