Site icon Vistara News

Himachal Election Result | ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಗೆಲುವು, ಕಾರಣಗಳು ಹಲವು!

Himachal Pradesh Congress

ಬಿಕ್ಕಟ್ಟಿನ ದಿನಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಗೆಲುವು, ಆ ಪಕ್ಷಕ್ಕೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ. ಸತತ ಸೋಲುಗಳಿಂದ ಜರ್ಜರಿತವಾಗಿದ್ದ ಕಾಂಗ್ರೆಸ್ ಈ ಗೆಲುವು ಬಹಳ ಮುಖ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಕ್ಲೀನ್ ಇಮೇಜ್ ಹೊಂದಿದ್ದ ಮುಖ್ಯಮಂತ್ರಿ ಇದ್ದಾಗ್ಯೂ ಬಿಜೆಪಿ ಸೋಲು ಕಂಡಿದ್ದು ಹೇಗೆ? ಕಾಂಗ್ರೆಸ್‌ ಗೆಲುವಿಗೆ ಕಾರಣವಾದ ಅಂಶಗಳಾವವು ಎಂಬ ಸಂಗತಿಗಳ ಮೇಲೆ ಕಣ್ಣಾಡಿಸಿದರೆ, ಬಿಜೆಪಿಯ ಸ್ವಯಂಕೃತ ತಪ್ಪುಗಳು ಮತ್ತು ಮತದಾರರು ಪ್ರತಿ ಬಾರಿ ಪಕ್ಷವನ್ನು ಬದಲಾಯಿಸುವ ಪ್ರವೃತ್ತಿಯು ಢಾಳವಾಗಿ ಕಾಣುತ್ತದೆ. ಜತೆಗೆ, ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆಗಳು ಬಿಜೆಪಿ ಸೋಲಿಗೆ ಸೋಪಾನವಾದರೆ, ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕೊಡುಗೆಯನ್ನು ನೀಡಿವೆ ಎಂದು ಹೇಳಬಹುದು(Himachal Election Result).

ಕಾಂಗ್ರೆಸ್ ಗೆಲುವಿನ ಕಾರಣಗಳು……….
| ಆಡಳಿತ ವಿರೋಧಿ ಅಲೆ ಮತ್ತು ಮರುಕಳಿಸಿದ ಇತಿಹಾಸ
ಬಿಜೆಪಿ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ಪಾಲಿಗೆ ವರದಾನವಾಯಿತು. ಜತೆಗೇ, ನಾಲ್ಕು ದಶಕಗಳ ಅವಧಿಯಲ್ಲಿ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿಲ್ಲ. ಈ ಪ್ರವೃತ್ತಿ 2022ರ ಚುನಾವಣೆಯಲ್ಲೂ ಮುಂದುವರಿದಿದೆ. ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ನಾಯಕರಾದ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮತ್ತು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೂ ತಮ್ಮ ಪಕ್ಷಗಳನ್ನು ಎರಡನೇ ಬಾರಿಗೆ ಅಧಿಕಾರ ತರಲು ಸಾಧ್ಯ ಆಗಿಲ್ಲ. ನಾಯಕತ್ವದ ಗೊಂದಲದ ಮಧ್ಯೆಯೂ ಅಲ್ಲಿನ ಜನರು ಕಾಂಗ್ರೆಸ್ ಕೈ ಹಿಡಿದಿದ್ದರಿಂದ ಪಕ್ಷವೂ ಅಧಿಕಾರಕ್ಕೇರಿದೆ.

| ಹಳೆ ಪಿಂಚಣಿ ವ್ಯವಸ್ಥೆಗೆ ಭರವಸೆ
ಕಾಂಗ್ರೆಸ್ ಗೆಲುವಿಗೆ ಸರ್ಕಾರಿ ನೌಕರರ ಕೊಡುಗೆಯೂ ಇದೆ. ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರ ಮತದಾರ ವರ್ಗವು ಬಹುದೊಡ್ಡ ಪರಿಣಾಮ ಬೀರುತ್ತದೆ. ರಾಜ್ಯದ ಮತದಾರರು ಈ ನೌಕರರು ಶೇ.5ರಷ್ಟಿದ್ದಾರೆ. ಸರ್ಕಾರಿ ನೌಕರ ವರ್ಗವು ಬಿಜೆಪಿ ಸರ್ಕಾರದ ವಿರುದ್ಧ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಪ್ರತಿಭಟನೆ ಮಾಡುತ್ತಲೇ ಬಂದಿದೆ. ಈ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳೆರಡೂ ಈ ಹಿಂದೆ ಇದ್ದ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ಭರವಸೆ ನೀಡಿವೆ. ಬಹುಶಃ ಇದು ಕೂಡ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.

| ಆಡಳಿತ ಯಂತ್ರ ವೈಫಲ್ಯ
ಹಿಮಾಚಲ ಪ್ರದೇಶದಲ್ಲಿ ಸಿಎಂ ಜೈರಾಮ್ ಠಾಕೂರ್ ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಅದೇ ಮಾತನ್ನು ಅವರ ಇತರ ಸಚಿವರು ಹಾಗೂ ಆಡಳಿತ ವರ್ಗಕ್ಕೆ ಅನ್ವಯಿಸುವಂತಿಲ್ಲ. ಕಳೆದ ಐದು ವರ್ಷದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬದಲಾವಣೆಯು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪೊಲೀಸ್ ನೇಮಕಾತಿ ಸ್ಕ್ಯಾಮ್ , ಆರಿ ನಗರ ಪಂಚಾಯ್ತಿ ನೋಟಿಫಿಕೇಷನ್, ಶಿಮ್ಲಾ ಡೆವಲಪ್‌ಮೆಂಟ್ ಕರಡು ಹಿಂತೆಗತ ನಿರ್ಧಾರಗಳು ಜನರಲ್ಲಿ ಅನುಮಾನ ಮೂಡಲು ಕಾರಣವಾದವು.

| ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ಬಿಸಿ
ಕಾಂಗ್ರೆಸ್‌ ಗೆಲುವಿಗೆ ಬಿಜೆಪಿಯ ಬಂಡಾಯ ಅಭ್ಯರ್ಥಿಗಳ ಕೊಡುಗೆಯೂ ಇದೆ. ಬಿಜೆಪಿಯು 11 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬಿಜೆಪಿ ಪಕ್ಷದ ಗೆಲುವಿನ ಮಾರ್ಜಿನ್ ಕೂಡ ಕಡಿಮೆಯಾಯಿತು ಅಲ್ಲದೇ, ಕೆಲವು ಕಡೆ ಕಾಂಗ್ರೆಸ್ ಗೆಲ್ಲಲು ಅನುಕೂಲವಾಯಿತು.

| ಸೇಬು ಬೆಳೆಗಾರರ ಅಸಮಾಧಾನ
ಹಿಮಾಚಲ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸೇಬು ಕೃಷಿ ಮತ್ತು ಮಾರಾಟ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರವು ಆದಾನಿ ಕಂಪನಿಗೆ ಅನುಕೂಲವಾಗುವಂತೆ ನಡೆದುಕೊಂಡಿದ್ದು, ಆ್ಯಪಲ್ ಲಾಬಿ ಸರ್ಕಾರ ವಿರುದ್ಧ ಕೋಪಗೊಳ್ಳಲು ಕಾರಣವಾಯಿತು. ಸೇಬು ಪೆಟ್ಟಿಗೆ ಮೇಲಿನ ಜಿಎಸ್‌ಟಿ ಹೆಚ್ಚಳವು ಭಾರೀ ಹೊಡೆತ ನೀಡಿತ್ತು. ತೋಟಗಾರಿಕೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಡ ಇಡಲು ಹೊರಟಿದ್ದು ಪ್ರತಿಭಟನೆ ಕಾರಣವಾಗಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಕಾರಣವಾದರೆ, ಕಾಂಗ್ರೆಸ್ ಗೆಲುವಿನ ಅಂಶಗಳಲ್ಲಿ ಒಂದಾಗಿದೆ.

| ಅಗ್ನಿವೀರ್ ಗಲಾಟೆ, ನಿರುದ್ಯೋಗ, ಬೆಲೆ ಏರಿಕೆ
ಬಿಜೆಪಿ ಸೋಲು ಹಾಗೂ ಕಾಂಗ್ರೆಸ್ ಗೆಲುವಿಗೆ ಬಹು ದೊಡ್ಡ ಕಾರಣಗಳ ಪೈಕಿ ಅಗ್ನಿವೀರ್ ಗಲಾಟೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆಗಳೂ ಪ್ರಮುಖವಾಗಿವೆ. ಬೆಲೆ ಏರಿಕೆ ವಿರುದ್ಧ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಭಾರೀ ಅಸಮಾಧಾನವಿತ್ತು. ಅದು ಚುನಾವಣಾ ಫಲಿತಾಂಶದಲ್ಲಿ ಢಾಳಾಗಿ ಕಂಡಿದೆ. ಅಗ್ನಿವೀರ್ ನೇಮಕಾತಿಯ ಬಗ್ಗೆ ಅಂಥ ಒಲವು ಇಲ್ಲ. ಜತೆಗೇ ಹೆಚ್ಚುತ್ತಿರುವ ನಿರುದ್ಯೋಗವು ಬಿಜೆಪಿ ಸರ್ಕಾರದ ವಿರುದ್ಧ ವೋಟ್ ಮಾಡುವಂತೆ ಮಾಡಿವೆ.

ಇದನ್ನೂ ಓದಿ | Gujarat Election Results | ಡೈಮಂಡ್‌ ಸಿಟಿ ಸೂರತ್‌ನಲ್ಲಿ ಮಿನುಗದ ಆಪ್‌; ಹೆಚ್ಚಿದ ಬಿಜೆಪಿ ಮೌಲ್ಯ

Exit mobile version