ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12ರಂದು ನಡೆದಿದ್ದ ಚುನಾವಣೆಯ ಕುತೂಹಲಕ್ಕೆ ಇಂದು (ಡಿ.8) ತೆರೆ ಬೀಳಲಿದೆ(Himachal Election Result). ಆಡಳಿತಾರೂಢ ಬಿಜೆಪಿ ಗೆದ್ದು ಇತಿಹಾಸವನ್ನು ಸೃಷ್ಟಿಸುವ ತವಕದಲ್ಲಿದ್ದರೆ, ಇತಿಹಾಸ ಮರುಕಳಿಸುವ ನಿರೀಕ್ಷೆಯಲ್ಲಿದೆ ಕಾಂಗ್ರೆಸ್. ಅಂದರೆ, ಹಿಮಾಚಲದಲ್ಲಿ ಒಂದು ಬಾರಿ ಕಾಂಗ್ರೆಸ್ ಮತ್ತೊಂದು ಬಾರಿ ಬಿಜೆಪಿ ಗೆಲ್ಲುವ ಪರಿಪಾಠವಿದೆ. ಹಾಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು ತಮ್ಮದೇ ಲೆಕ್ಕಾಚಾರದಲ್ಲಿವೆ. ಇದರ ಮಧ್ಯೆಯೇ, ಎಕ್ಸಿಟ್ ಪೋಲ್‌ಗಳು ಮಾತ್ರ, ಉಭಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿಯ ಬಗ್ಗೆ ಹೇಳಿವೆ.
ಹಿಮಾಚಲ ಪ್ರದೇಶ ವಿಧಾನಸಭೆಯು ಒಟ್ಟು 68 ಸದಸ್ಯರನ್ನು ಹೊಂದಿದೆ. ಸರ್ಕಾರ ರಚಿಸಲು 35 ಮ್ಯಾಜಿಕ್ ನಂಬರ್ ದಾಟಬೇಕು. ಬಹುತೇಕ ಎಕ್ಸಿಟ್ ಪೋಲ್‌ಗಳು ನೆಕ್ ಟು ನೆಕ್ ಫಲಿತಾಂಶವನ್ನು ಪ್ರಿಡಿಕ್ಟ್ ಮಾಡಿವೆ. ಒಂದೆರಡು ಎಕ್ಸಿಟ್ ಪೋಲ್, ಅತಂತ್ರ ವಿಧಾನಸಭೆಯನ್ನು ಊಹೆ ಮಾಡಿವೆ. ಮತದಾನ ಎಣಿಕೆಯು ಡಿ.8, ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಬಳಿಕ ಒಂದೆರಡು ಗಂಟೆಯಲ್ಲಿ ಟ್ರೆಂಡ್ ಗೊತ್ತಾಗಬಹುದು. ಮಧ್ಯಾಹ್ನದ ಹೊತ್ತಿಗೆ ಹಿಮಾಚಲ ಪ್ರದೇಶದ ಒಟ್ಟು ಫಲಿತಾಂಶವನ್ನು ಜನರು ನಿರೀಕ್ಷಿಸಬಹುದಾಗಿದೆ.
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಮತದಾನ ನಡೆದಿತ್ತು. ಒಟ್ಟು 75.6 ಪ್ರತಿಶತ ಮತದಾನ ನಡೆದಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಇದೆ. ಆದರೆ, ಆಪ್ ಕೂಡ ನಿರೀಕ್ಷಿಸುವಂತಿಲ್ಲ. 68 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧೆ ಮಾಡಿತ್ತು. ಬಿಎಸ್‌ಪಿ 53, ರಾಷ್ಟ್ರೀಯ ದೇವಭೂಮಿ ಪಾರ್ಟಿ 29, ಸಿಪಿಎಂ 11, ಹಿಮಾಚಲ ಜನ ಕ್ರಾಂತಿ ಪಾರ್ಟಿ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 68 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ?
2017ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 68 ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೇರಿತು. ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಕೂಡ, ಬಿಜೆಪಿ ಮತ್ತೆ ಅದೇ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಕಾಂಗ್ರೆಸ್ ಕೂಡ ಸಾಕಷ್ಟು ಪೈಪೋಟಿ ನೀಡುವುದನ್ನು ಅಲ್ಲಗಳೆಯುವಂತಿಲ್ಲ. ಇದರ ಮಧ್ಯೆ, ಆಪ್, ಯಾವ ಪಕ್ಷಕ್ಕೆ ಅಪಾಯವನ್ನುಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
ಯಾರು ಸಿಎಂ?
ಒಂದೊಮ್ಮೆ ಬಿಜೆಪಿ ಗೆದ್ದರೆ ಮುಂದಿನ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಅವರೇ ಮುಂದುವರಿಯುವ ಸಾಧ್ಯತೆಗಳೇ ಹೆಚ್ಚು. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಂದಿನ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಎಂದು ಹೇಳಿಯಾಗಿದೆ. ಒಂದೊಮ್ಮೆ ಕಾಂಗ್ರೆಸ್ ಏನಾದರೂ ಅಧಿಕಾರಕ್ಕೇರಿದರೆ ಆಶಾ ಕುಮಾರಿ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ. ಡಾಲ್‌ಹೌಸಿ ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಆಶಾ ಕುಮಾರಿ ಅವರು ಕಾಂಗ್ರೆಸ್‌ನ ಜನಪ್ರಿಯ ನಾಯಕಿಯಾಗಿದ್ದಾರೆ. ಆಶಾ ಕುಮಾರಿ ಮಾತ್ರವಲ್ಲದೇ ಇನ್ನೂ ಒಂದಿಷ್ಟು ಆಕಾಂಕ್ಷಿಗಳಿದ್ದಾರೆ.
ಎಕ್ಸಿಟ್ ಪೋಲ್‌ಗಳು ಹೇಳುವುದೇನು?
ಸೋಮವಾರ ಸಂಜೆ ಪ್ರಕಟವಾದ ಬಹುತೇಕ ಮತದಾನೋತ್ತರ ಸಮೀಕ್ಷೆಗಳು (Exit Poll 2022) ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿವೆ. ಆದರೆ, ಇದಕ್ಕೆ ಅದು ಭಾರೀ ಕಷ್ಟಪಡುವುದನ್ನು ಈ ಸಮೀಕ್ಷೆಗಳು ತಳ್ಳಿ ಹಾಕಿಲ್ಲ. ಅಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯ ತೀವ್ರ ಪೈಪೋಟಿ ಇದೆ. ಒಂದೆರಡು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನೂ ಪ್ರಿಡಿಕ್ಟ್ ಮಾಡಿವೆ.
| ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಬಿಜೆಪಿ 24ರಿಂದ 34, ಕಾಂಗ್ರೆಸ್ 30ರಿಂದ 40 ಸ್ಥಾನಗಳ್ನು ಗೆಲ್ಲಲಿದೆ. ಆಪ್ ಶೂನ್ಯ ಸಾಧನೆ ಮಾಡಲಿದೆ. ಇತರರು ನಾಲ್ಕರಿಂದ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಈ ಸಮೀಕ್ಷೆ ನಿಜವಾದರೆ, ಕಾಂಗ್ರೆಸ್‌ಗೆ ಅಧಿಕಾರ ಒಲಿಯಲಿದೆ.
| ಜನ್ ಕಿ ಬಾತ್-ಇಂಡಿಯಾ ನ್ಯೂಸ್ ಸಮೀಕ್ಷೆಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಬಹುದು. ಬಿಜೆಪಿ 34ರಿಂದ 40 ಹಾಗೂ ಕಾಂಗ್ರೆಸ್ 34ರಿಂದ 27 ಹಾಗೂ ಇತರರು 1ರಿಂದ 2 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಈ ಸಮೀಕ್ಷೆಯ ಪ್ರಕಾರ ಬಹುತೇಕ ಬಿಜೆಪಿ ಅಧಿಕಾರಕ್ಕೆ ಏರಲಿದೆ.
| ರಿಪಬ್ಲಿಕ್ ಮತ್ತು ಪಿಮಾರ್ಕ್ ಸಮೀಕ್ಷೆಯಲ್ಲೂ ಬಿಜೆಪಿ ನಿರಾಯಾಸವಾಗಿ ಗೆಲುವ ಸಾಧಿಸಲಿದೆ. ಕಾಂಗ್ರೆಸ್ ಪಕ್ಷವು 28ರಿಂದ 33 ಸ್ಥಾನಗಳನ್ನು ಗೆಲ್ಲಲು ಶಕ್ಯವಾದರೆ, ಬಿಜೆಪಿಯು 34ರಿಂದ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆಪ್ ಒಂದು ಮತ್ತು ಇತರರು ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳಬಹುದು.
| ಟೈಮ್ಸ್ ನೌ-ಇಟಿಜಿ ಸಮೀಕ್ಷೆ. ಈ ಎಕ್ಸಿಟ್ ಪೋಲ್ ಪ್ರಕಾರವೂ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ 24ರಿಂದ 32 ಕ್ಷೇತ್ರಗಳನ್ನು ಗೆದ್ದುಕೊಂಡರೆ, ಬಿಜೆಪಿ 34ರಿಂದ 42 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಬಹುದು. ಇನ್ನುಶೂನ್ಯ ಸಾಧನೆ ಮಾಡಿದರೆ, ಇತರರು 1ರಿಂದ 3 ಸ್ಥಾನಗಳನ್ನು ಗೆಲ್ಲಬಹುದು.
| ಇಂಡಿಯಾ ಟೀವಿ ಸಮೀಕ್ಷೆ. ಬಿಜೆಪಿಯ 35ರಿಂದ 40 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 26ರಿಂದ 31 ಕ್ಷೇತ್ರಗಳಲ್ಲಿ ಗೆಲುವು ಕಾಣಬಹುದು. ಇತರರು ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದ್ದಾರೆ.
| ಝೀ ನ್ಯೂಸ್ ಎಕ್ಸಿಟ್ ಪೋಲ್. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ. ಒಟ್ಟು 35 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 20ರಿಂದ 25 ಸ್ಥಾನಗಳಿಗ ತೃಪ್ತಿ ಪಡಲಿದೆ. ಆಪ್ ಎರಡು ಸ್ಥಾನ ಗೆಲ್ಲಬಹುದು. ಇತರರು ಒಂದರಿಂದ 5 ಕ್ಷೇತ್ರದಲ್ಲಿ ಜಯ ಸಾಧಿಸಬಹುದು.
| ಟಿವಿ9 ಭರತ್ ವರ್ಷ ಎಕ್ಸಿಟ್ ಪೋಲ್. ಈ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಊಹೆ ಮಾಡಲಾಗಿದೆ. ಬಿಜೆಪಿ 32ರಿಂದ 34 ಸ್ಥಾನ ಗೆದ್ದರೆ, ಕಾಂಗ್ರೆಸ್ 30ರಿಂದ 32 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಆಗ ಉಭಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬರಲಿದೆ. ಇನ್ನು ಆಪ್ ಶೂನ್ಯ ಸಾಧನೆ ಮಾಡಿದರೆ, ಇತರರು ಮೂರರಿಂದ 5 ಕ್ಷೇತ್ರ ಗೆಲ್ಲಬಹುದು.
ಇದನ್ನೂ ಓದಿ | Exit Poll 2022 | ಹಿಮಾಚಲ ಪ್ರದೇಶದಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು! ಕಾಂಗ್ರೆಸ್ ಜತೆ ಟೈಟ್ ಫೈಟ್