Site icon Vistara News

Himachal Election Result | ಮೋದಿ, ಠಾಕೂರ್ ಇದ್ದೂ ಹಿಮಾಚಲದಲ್ಲಿ ಬಿಜೆಪಿ ಸೋತಿದ್ದೇಕೆ?

Shaha_Modi_Nada @ Himachal pradesh

ಗೆಲುವು ಸಾಧಿಸುವ ಮೂಲಕ ಹಿಮಾಚಲ ಪ್ರದೇಶದಲ್ಲಿ ಇತಿಹಾಸ ಸೃಷ್ಟಿಸಲು ಹೊರಟಿದ್ದ ಬಿಜೆಪಿಗೆ ಮತದಾರರು ನಿರಾಸೆ ಮೂಡಿಸಿದ್ದಾರೆ. ಪರಿಣಾಮವಾಗಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ. ಮೇಲ್ನೋಟಕ್ಕೆ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲಾಗುತ್ತಿತ್ತು. ಹಿಮಾಚಲ ಪ್ರದೇಶದಲ್ಲಿ ಬಹುತೇಕ ಎಕ್ಸಿಟ್‌ ಪೋಲ್‌ಗಳು ನೆಕ್‌ ಟು ನೆಕ್ ಸ್ಪರ್ಧೆ, ಬಿಜೆಪಿ ಅಧಿಕಾರಕ್ಕೆ ಏರಬಹುದು ಎಂದು ಹೇಳಿದ್ದವು. ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮಾತ್ರ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಊಹಿಸಿತ್ತು. ಇದು ನಿಜವಾಗಿದೆ. ಹಾಗಾದರೆ, ಬಿಜೆಪಿ ಸೋತಿದ್ದೇಕೆ? ಪ್ರಧಾನಿ ನರೇಂದ್ರ ಮೋದಿಯಂಥ ಜನಪ್ರಿಯ ಹಾಗೂ ಪ್ರಭಾವಿ ನಾಯಕ, ಜನಪ್ರಿಯ ಲೀಡರ್ ಸಿಎಂ ಜೈರಾಂ ಠಾಕೂರ್ ಅವರಂಥರು ಇದ್ದೂ ಬಿಜೆಪಿ ಸೋಲು ಕಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈಗ ಹೊರ ಬರುತ್ತಿರುವ ವಿಶ್ಲೇಷಣೆಗಳು ಪ್ರಕಾರ, ಅತಿಯಾದ ಆತ್ಮವಿಶ್ವಾಸ ಬಿಜೆಪಿ ಸೋಲಿಗೆ ಕಾರಣವಾಗಿದೆ. ಜತೆಗೆ ಬೆಲೆ ಏರಿಕೆಯಂಥ ಸಮಸ್ಯೆಗಳು ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿವೆ(Himachal Election Result).

ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳು….
| ಮರುಕಳುಹಿಸಿದ ಇತಿಹಾಸ

ಹಿಮಾಚಲ ಪ್ರದೇಶದಲ್ಲಿ ಮತದಾರರು ಯಾವುದೇ ಪಕ್ಷಕ್ಕೆ ಸತತವಾಗಿ ಜನಾದೇಶವನ್ನು ನೀಡಿಲ್ಲ. ಒಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿದರೆ, ಮತ್ತೊಂದು ಅವಧಿಗೆ ಬಿಜೆಪಿಗೆ ಜನರು ಮತ ನೀಡಿದ್ದಾರೆ. ಹಾಗಾಗಿ, ಅಧಿಕಾರದಲ್ಲಿದ್ದ ಬಿಜೆಪಿ ಸೋಲು ಕಂಡರೆ, ಕಾಂಗ್ರೆಸ್ ಗೆಲುವು ಸಾಧಿಸಿದೆ.
| ಬಿಜೆಪಿಗೆ ತಟ್ಟಿದ ಆಡಳಿತ ವಿರೋಧಿ ಅಲೆ

ಬೆಲೆ ಏರಿಕೆ ಬಗ್ಗೆ ಜನರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವಿತ್ತು. ಅದರ ಎಫೆಕ್ಟ್ ಚುನಾವಣೆಯಲ್ಲಿ ಪ್ರಕಟವಾಗಿದೆ.
| ಸಿಎಂ ಜೈ ರಾಮ್ ಠಾಕೂರ್ ಸಂಪುಟ ಸಚಿವರ ಅದಕ್ಷತೆ

ಠಾಕೂರ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಅಂಥ ತಕರಾರು ಇರಲಿಲ್ಲ. ಆದರೆ, ಇದೇ ಮಾತನ್ನು ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಹೇಳುವಂತಿಲ್ಲ. ಠಾಕೂರ್ ಅವರ ಬಗ್ಗೆ ಜನರಿಗೆ ತಕರಾರು ಇರಲಿಲ್ಲ ಎಂಬುದಕ್ಕೆ ಅವರು ಭಾರೀ ಮತಗಳ ಅಂತರದಿಂದ ಗೆದ್ದಿರುವುದೇ ಸಾಕ್ಷಿ. ಶೇ.76ರಷ್ಟು ಮತ ಪಡೆದು ಅವರು ಜಯಭೇರಿ ಬಾರಿಸಿದ್ದಾರೆ. ಆದರೆ, ಅವರ ಸಚಿವ ಸಂಪುಟದ ಬಹುತೇಕರು ಸೋಲುಂಡಿದ್ದಾರೆ.
| ಬಿಜೆಪಿ ಅಬ್ಬರ ಪ್ರಚಾರದ ಮುಂದೆ ಕಾಂಗ್ರೆಸ್‌ ಮನೆಮನೆ ಪ್ರಚಾರ

ಹಿಮಾಚಲದಲ್ಲಿ ಬಿಜೆಪಿ ಕೊಂಚ ಅಬ್ಬರದ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿತ್ತು. ಮತದಾರರನ್ನು ಮುಖತಃ ಭೇಟಿ ಮಾಡಿ ಮತ ಕೇಳಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಕಾರಣವಾಗಿದೆ.
| ಸ್ಥಳೀಯ ಸಮಸ್ಯೆಗಳ ಕಡೆಗಣನೆ

ಬಿಜೆಪಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಮಾತನಾಡದಿರುವುದು ಕೂಡ ಸೋಲಿಗೆ ಕಾರಣವಾಯಿತು. ಜತೆಗೇ ಸ್ಥಳೀಯ ನಾಯಕತ್ವಕ್ಕೂ ಮನ್ನಣೆ ದೊರೆಯಲಿಲ್ಲ.
| ಬಂಡಾಯ, ಭಿನ್ನಮತೀಯ ಚಟುವಟಿಕೆ

ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ಇತ್ತು. ಚುನಾವಣೆಗೆ ಸ್ಪರ್ಧಿಸಲು ಕೆಲವರಿಗೆ ಟಿಕೆಟ್‌ ನಿರಾಕರಿಸಲಾಯಿತು. ಅವರು ಪಕ್ಷೇತರರಾಗಿ ನಿಂತಿದ್ದು ಬಿಜೆಪಿಗೆ ಮುಳುವಾಯಿತು.

ಇದನ್ನೂ ಓದಿ | Election Results Live Updates| ಗುಜರಾತ್​​ನಲ್ಲಿ 7ನೇ ಬಾರಿಗೆ ಅರಳಿದ ಕಮಲ; ‘ಕೈ’ ಹಿಡಿದ ಹಿಮಾಚಲ ಪ್ರದೇಶ

Exit mobile version