ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನಡೆ ಸಾಧಿಸಿದೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಕಾಂಗ್ರೆಸ್ 3೮ ಸ್ಥಾನಗಳಲ್ಲಿ ಲೀಡ್ ಗಳಿಸಿತ್ತು. ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು. ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರು.
ಒಟ್ಟು 68 ಕ್ಷೇತ್ರಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 35 ಆಗಿದ್ದು, ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಪ್ರಸ್ತುತ ಅಧಿಕಾರದಲ್ಲಿದೆ.
ಹಿಮಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಒಂದು ಸಲ ಬಿಜೆಪಿ, ಮತ್ತೊಂದು ಸಲ ಕಾಂಗ್ರೆಸ್ ಎಂಬಂತೆ ಉಭಯ ಪಕ್ಷಗಳ ನಡುವೆ ಪರ್ಯಾಯವಾಗಿ ಅಧಿಕಾರ ಹಸ್ತಾಂತರ ಇದುವರೆಗೆ ಆಗಿದೆ. ಈ ಸಲ ಇದೇ ಟ್ರೆಂಡ್ ಮುಂದುವರಿಯುವ ಲಕ್ಷಣ ಕಾಣಿಸುತ್ತಿದೆ.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಹಿಮಾಚಲ ಪ್ರದೇಶ ಕಾಂಗ್ರೆಸ್ ಘಟಕದಲ್ಲಿ ಐದಾರು ಮಂದಿ ಸಿಎಂ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಸರಳ ಬಹುಮತ ಗಳಿಸಿ ಅಧಿಕಾರಕ್ಕೇರಿದರೆ, ಸಿಎಂ ಆಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬುದು ಈಗಲೇ ಹೇಳುವುದು ಕಷ್ಟ ಎಂಬ ಪರಿಸ್ಥಿತಿ ಇದೆ.
ಹಿಮಾಚಲ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರು ಸಿಎಂ ಹುದೆ ಆಕಾಂಕ್ಷಿಗಳಲ್ಲೊಬ್ಬರು. ಅವರು ಮಾಜಿ ಸಿಎಂ ವೀರಭದ್ರಸಿಂಗ್ ಅವರ ಪತ್ನಿಯೂ ಆಗಿದ್ದಾರೆ. ಉಳಿದಂತೆ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಖ್‌ವಿಂದರ್ ಸಿಂಗ್, ಹಿಮಾಚಲ ಪ್ರದೇಶ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ, ಆರು ಮಾರಿ ಶಾಸಕಿಯಾಗಿರುವ ಆಶಾ ಕುಮಾರಿ ಅವರು ರೇಸ್‌ನಲ್ಲಿದ್ದಾರೆ.